ಟ್ರಂಪ್ ಸಂಪುಟದಲ್ಲಿ ನಾಲ್ವರು ಕುಬೇರರು
ಬಿಳಿಯರು, ಸಂಪ್ರದಾಯವಾದಿಗಳಿಗೆ ಮಣೆ
ವಾಶಿಂಗ್ಟನ್, ಡಿ.10: ಜನವರಿ 20ರಿಂದ ಅಮೆರಿಕದ ಆಡಳಿತ ಸೂತ್ರವನ್ನು ಕೈಗೆತ್ತಿಕೊಳ್ಳ ಲಿರುವ ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಂಪುಟದಲ್ಲಿ ಬಿಳಿಯ ಜನಾಂಗೀಯರ ಬಾಹುಳ್ಯವಿದ್ದು, ಭಾರೀ ಶ್ರೀಮಂತರನ್ನು ಒಳಗೊಂಡಿದೆ. ಟ್ರಂಪ್ ಸಂಪುಟವು ನಾಲ್ವರು ಶತಕೋಟ್ಯಧಿಪತಿಗಳು, ಮೂವರು ಮಾಜಿ ಸೇನಾಧಿಕಾರಿಗಳು,ಮೂವರು ಮಹಿಳೆಯರು ಹಾಗೂ ಕೆಲವು ಸಂಪ್ರದಾಯವಾದಿಗಳನ್ನು ಹೊಂದಿದೆ. ಈವರೆಗೆ ಟ್ರಂಪ್ ತನ್ನ ಸಂಪುಟಕ್ಕೆ 13 ಮಂದಿಯನ್ನು ಆಯ್ಕೆ ಮಾಡಿದ್ದು, ಅವರಲ್ಲಿ ಬಹುತೇಕ ಮಂದಿ ಬಿಳಿಜನಾಂಗೀಯ ಪುರುಷರಾಗಿದ್ದಾರೆ.ಮೂವರು ಮಹಿಳೆಯರು, ಇಬ್ಬರು ಏಶ್ಯನ್-ಅಮೆರಿಕನ್ ಮೂಲದವರು ಹಾಗೂ ಓರ್ವ ಕರಿಯ ಜನಾಂಗೀಯ ಕೂಡಾ ಈ ಸಂಪುಟದಲ್ಲಿದ್ದಾರೆ. ಆದರೆ ಈವರೆಗೆ ಹಿಸ್ಪಾನಿಕ್(ಲ್ಯಾಟಿನ್ ಅಮೆರಿಕ) ಮೂಲದ ಒಬ್ಬನೇ ಒಬ್ಬ ಸಂಪುಟಕ್ಕೆ ಸೇರ್ಪಡೆಯಾಗಿಲ್ಲ. ದಿವಾಳಿಯೆದ್ದ ಕಂಪೆನಿಗಳನ್ನು ಖರೀದಿಸಿ, ಭಾರೀ ಸಂಪತ್ತನ್ನು ಸಂಪಾದಿಸಿರುವ ಖಾಸಗಿ ಫೈನಾನ್ಶಿಯರ್ ವಿಲ್ಬರ್ಟ್ ರೋಸ್‌ರನ್ನು ಟ್ರಂಪ್‌ವಾಣಿಜ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ. ಚಿಕಾಗೋ ಮೂಲದ ಬಿಲಿಯಾಧೀಶ ಟಾಡ್ ರಿಕೆಟ್ಸ್ ಅವರು ಸಹಾಯಕ ವಾಣಿಜ್ಯ ಕಾರ್ಯದರ್ಶಿಯಾಗಿ ಹಾಗೂ ಹಾಲಿವುಡ್ ಚಿತ್ರಗಳ ನಿರ್ಮಾಪಕ ಸ್ಟೀವನ್ ನ್ಯೂಶಿನ್‌ರನ್ನು ಖಜಾನೆ ಕಾರ್ಯದರ್ಶಿ ಹಾಗೂ ಆಹಾರ ಉತ್ಪನ್ನಗಳ ಉದ್ಯಮಿ ಆ್ಯಂಡ್ರೂರನ್ನು ಕಾರ್ಮಿಕ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.





