ಶಿಕ್ಷಣ, ಉದ್ಯೋಗದ ಮೂಲಕವೂ ಐಸಿಸ್ ಸೋಲಿಸಲು ಸಾಧ್ಯ
ಜರ್ಮನ್ ರಕ್ಷಣಾ ಕಾರ್ಯದರ್ಶಿ ಲಿಯೆನ್ ಕರೆ

ದುಬೈ,ಡಿ.10: ಐಸಿಸ್‌ನ್ನು ಯುದ್ಧರಂಗದಲ್ಲಿ ಮಾತ್ರವಲ್ಲದೆ ಶಿಕ್ಷಣ ಹಾಗೂ ಸಹಿಷ್ಣುತೆಯ ಪ್ರಚಾರ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕವೂ ಸೋಲಿಸಲು ಸಾಧ್ಯವಿದೆಯೆಂದು ಜರ್ಮನಿಯ ರಕ್ಷಣಾ ಸಚಿವ ಉರ್ಸುಲಾ ವೊನ್ ಡೆರ್ ಲಿಯೆನ್ ಶನಿವಾರ ತಿಳಿಸಿದ್ದಾರೆ.
ದುಬೈನಲ್ಲಿ ಶನಿವಾರ ನಡೆದ ಗಲ್ಫ್ ಭದ್ರತಾ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು, ಭಯೋತ್ಪಾದನೆಯ ವಿರುದ್ಧದ ಮೈತ್ರಿಕೂಟಕ್ಕೆ ಪೂರಕವಾಗಿ ಶಿಕ್ಷಣಕ್ಕಾಗಿ ಮೈತ್ರಿಕೂಟವನ್ನು ಕೂಡಾ ರಚಿಸುವ ಅಗತ್ಯವಿದೆಯೆಂದು ಪ್ರತಿಪಾದಿಸಿದರು.
ಭಯೋತ್ಪಾದನೆಯ ವಿರುದ್ಧ ಹೋರಾಡುತ್ತಿರುವ ಅಮೆರಿಕ ನೇತೃತ್ವದ ಮೈತ್ರಿಕೂಟದ ಸದಸ್ಯ ರಾಷ್ಟ್ರಗಳು, ಜಗತ್ತಿನ ಜನತೆಗೆ ಉತ್ತಮ ಭವಿಷ್ಯತ್ತಿನ ಬಗ್ಗೆ ಭರವಸೆಯ ಸಂದೇಶಗಳನ್ನು ಹರಡುವ ಮೂಲಕ ಐಸಿಸ್‌ನ ಬರ್ಬರವಾದ ಸುಳ್ಳುಗಳನ್ನು ಹತ್ತಿಕ್ಕಬೇಕೆಂದು ಉರ್ಸುಲಾ ಕರೆ ನೀಡಿದರು.
ಗೂಗ್ಲ್,ಫೇಸ್‌ಬುಕ್,ಯೂಟ್ಯೂಬ್, ಇನ್‌ಸ್ಟಾಗ್ರಾಮ್ ಹಾಗೂ ಇನ್ನೂ ಹಲವು ವೇದಿಕೆಗಳು ಇಂದು ಮಾರಕ ಶಸ್ತ್ರಾಸ್ತ್ರಗಳಂತೆ ಕಾರ್ಯನಿರ್ವಹಿಸುತ್ತಿವೆ. ಈ ಅಂತಾರ್ಜಾಲ ತಾಣಗಳ ಮೂಲಕ ಹರಿದುಬರುವ ಪೊಳ್ಳು ಭರವಸೆಗಳು ಹಾಗೂ ಬರ್ಬರವಾದ ಸುಳ್ಳುಗಳನ್ನು ಜನರು ಸುಲಭವಾಗಿ ನಂಬುತ್ತಿದ್ದಾರೆ ಎಂದವರು ವಿಷಾದ ವ್ಯಕ್ತಪಡಿಸಿದರು. ಯುದ್ಧವನ್ನು ಗೆಲ್ಲಲು ನಾವು ಇಂಟರ್‌ನೆಟ್ ಮೇಲೂ ಪಾರಮ್ಯ ಸಾಧಿಸಬೇಕಿದೆ. ಆದರೆ ಶಾಂತಿಯನ್ನು ಗೆಲ್ಲಬೇಕಾದರೆ ನಾವು ಭರವಸೆ ಹಾಗೂ ಅಭಿವೃದ್ಧಿಯ ಕೊಡುಗೆಯನ್ನು ನೀಡಬೇಕಿದೆ ಎಂದು ಉರ್ಸುಲಾ ಕರೆ ನೀಡಿದರು.





