ಹೈಕೋರ್ಟ್ ಶಿಸ್ತುಕ್ರಮಾಧಿಕಾರಿ ಅಲ್ಲ: ಸುಪ್ರೀಂ ಕೋರ್ಟ್
ಹೊಸದಿಲ್ಲಿ, ಡಿ.10: ಹೈಕೋರ್ಟ್ ಶಿಸ್ತುಕ್ರಮಾಧಿಕಾರಿ ಅಲ್ಲ ಹಾಗೂ ಹದ್ದುಮೀರಿದ ಸಿಬ್ಬಂದಿಗೆ ಕಠಿಣ ದಂಡ ವಿಧಿಸಿದ ಉದ್ಯೋಗದಾತರಿಗೆ ಶಿಕ್ಷೆ ವಿಧಿಸುವುದು ಹೈಕೋರ್ಟ್‌ನ ಕೆಲಸವಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ಯಾವುದೇ ಶಿಕ್ಷೆ ವಿಧಿಸುವ ಅಧಿಕಾರ ಶಿಸ್ತು ಕ್ರಮಾಧಿಕಾರಿಗೆ ಇರುತ್ತದೆ. ಹೈಕೋರ್ಟ್ ಶಿಸ್ತು ಕ್ರಮಾಧಿಕಾರಿ ಅಲ್ಲ ಎಂದು ನ್ಯಾಯಾಧೀಶ ಎ.ಕೆ.ಸಿಕ್ರಿ ಅವರನ್ನೊಳ ಗೊಂಡ ಪೀಠವೊಂದು ತಿಳಿಸಿದೆ. ಆಂಧ್ರಪ್ರದೇಶದ ಐದು ಪ್ರಾಥಮಿಕ ಕೃಷಿ ಸಹಕಾರ ಸಂಘಗಳ ಸೂಪರ್‌ವೈಸರ್ ಆಗಿದ್ದ ಕೆ.ಹನುಮಂತ ರಾವ್ ಅವರನ್ನು ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಕೃಷ್ಣಾ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಶಿಸ್ತುಕ್ರಮ ಅಧಿಕಾರಿ ಸೇವೆಯಿಂದ ವಜಾ ಮಾಡಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಬ್ಯಾಂಕ್‌ನ ಶಿಸ್ತುಕ್ರಮ ಅಧಿಕಾರಿಯ ಆದೇಶವವನ್ನು ಅಮಾನ್ಯಗೊಳಿಸಿ ತೀರ್ಪು ನೀಡಿತ್ತು.
ಈ ತೀರ್ಪಿನ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿ, ಹೈಕೋರ್ಟ್‌ನ ಆದೇಶವನ್ನು ತಳ್ಳಿ ಹಾಕಿದೆ.





