ಸೌದಿ ಜೊತೆ ನಂಟಿರುವ ತನ್ನ ಕಂಪೆನಿಗಳ ಮುಚ್ಚಿದ ಟ್ರಂಪ್
ವಾಶಿಂಗ್ಟನ್,ಡಿ.10: ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚುನಾವಣೆಯ ಬಳಿಕ ತನ್ನ ಕೆಲವು ಕಂಪೆನಿಗಳನ್ನು ಮುಚ್ಚುಗಡೆಗೊಳಿಸಿದ್ದು, ಅವುಗಳಲ್ಲಿ ನಾಲ್ಕು ಸೌದಿ ಅರೇಬಿಯದ ಉದ್ಯಮರಂಗದ ಜೊತೆ ನಂಟು ಹೊಂದಿದ್ದವೆಂದು ಡೆಲಾವೆರ್ ರಾಜ್ಯದ ಕಾರ್ಪೊರೇಟ್ ನೋಂದಣಿಗಳ ಸಂಸ್ಥೆ ಶುಕ್ರವಾರ ತಿಳಿಸಿದೆ.
ಚುನಾವಣೆ ನಡೆದ ಬಳಿಕ ಕನಿಷ್ಠ 9 ಕಂಪೆನಿಗಳು ಮುಚ್ಚುಗಡೆಗೊಳಿಸುವ ನಿಟ್ಟಿನಲ್ಲಿ ಟ್ರಂಪ್ ರೂಪುರೇಷೆಗಳನ್ನು ಸಿದ್ಧಪಡಿಸಿದ್ದರೆನ್ನಲಾಗಿದೆ.
ಅಂತಾರಾಷ್ಟ್ರೀಯ ಉದ್ಯಮಿಯಾದ ಟ್ರಂಪ್ ರಾಷ್ಟ್ರಾಧ್ಯಕ್ಷನಾಗಿ ವಿದೇಶಗಳ ಜೊತೆ ವ್ಯವಹರಿಸುವಾಗ ಸಂಘರ್ಷಗಳ ಹಿತಾಸಕ್ತಿಯುಂಟಾಗುವ ಸಾಧ್ಯತೆಯಿದೆಯೆಂಬ ಆತಂಕಗಳು ವ್ಯಕ್ತವಾದ ಬೆನ್ನಲ್ಲೇ ಈ ಕ್ರಮ ಕೈಗೊಂಡಿದ್ದಾರೆ. ಅಮೆರಿಕದ ಅಧ್ಯಕ್ಷನಾದ ಬಳಿಕ ಟ್ರಂಪ್ ಸಂಭಾವ್ಯ ಸಂಘರ್ಷಗಳ ಹಿತಾಸಕ್ತಿಗಳನ್ನು ತಪ್ಪಿಸುವ ಉದ್ದೇಶದಿಂದ ತಾನು ನಡೆಸುತ್ತಿರುವ ಉದ್ಯಮವ್ಯವಹಾರಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ನಿರೀಕ್ಷೆಯಿದೆಯೆಂದು ಈ ಹಿಂದೆ ವರದಿಯಾಗಿದ್ದವು.
ರಾಷ್ಟ್ರಾಧ್ಯಕ್ಷನಾಗಿ ಕಾರ್ಯನಿರ್ವಹಿಸುವಾಗ ತನ್ನ ಉದ್ಯಮ ಹಿತಾಸಕ್ತಿಗಳಿಂದ ಹೇಗೆ ತಾನು ಪ್ರತ್ಯೇಕವಾಗಿರುವೆನೆಂಬ ಬಗ್ಗೆ ಮುಂದಿನವಾರ ಯೋಜನೆಯೊಂದನ್ನು ಪ್ರಕಟಿಸುವುದಾಗಿ ಟ್ರಂಪ್ ತಿಳಿಸಿದ್ದಾರೆ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಟ್ರಂಪ್ ಅವರು ಸೌದಿ ರಾಜಧಾನಿ ಜಿದ್ದಾ ಸೇರಿದಂತೆ ಮಧ್ಯಪ್ರಾಚ್ಯದ ದೇಶಗಳಲ್ಲಿ ಎಂಟು ಕಂಪೆನಿಗಳನ್ನು ಸ್ಥಾಪಿಸಿದ್ದರು. ಆದರೆ ಈ ಕಂಪೆನಿಗಳು ಸೃಷ್ಟಿಯಾದ ಕೆಲವೇ ತಿಂಗಳುಗಳೊಳಗೆ ಅವುಗಳ ಪೈಕಿ ಐದನ್ನ್ನು ಟ್ರಂಪ್ ಮುಚ್ಚಿಬಿಟ್ಟಿದ್ದರು. ಉಳಿದ ಮೂರು ಕಂಪೆನಿಗಳನ್ನು ಚುನಾವಣೆ ನಡೆದ ಬಳಿಕ ವಿಸರ್ಜಿಸಿದ್ದರು.







