ದಿಲ್ಲಿ: ಖಾಸಗಿ ಲ್ಯಾಬ್‌ಗಳಲ್ಲಿ ಎಂಆರ್‌ಐ, ಸಿಟಿ ಸ್ಕ್ಯಾನ್ ಉಚಿತ!
ಹೊಸದಿಲ್ಲಿ, ಡಿ.10: ಖಾಸಗಿ ಲ್ಯಾಬೊರೇಟರಿಗಳಲ್ಲಿ ಜನಸಾಮಾನ್ಯರಿಗೆ ಉಚಿತ ಎಂಆರ್‌ಐ ಹಾಗೂ ಸಿಟಿ ಸ್ಕ್ಯಾನ್ ಸೌಲಭ್ಯವನ್ನು ಒದಗಿಸಲು ದಿಲ್ಲಿ ಸರಕಾರ ಮುಂದಾಗಿದೆ. ಮೂರು ಲಕ್ಷಕ್ಕಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವ ದಿಲ್ಲಿ ನಿವಾಸಿಗಳಿಗೆ ಈ ಸೌಲಭ್ಯ ಸಿಗಲಿದೆ ಎಂದು ದಿಲ್ಲಿ ಸರಕಾರ ಮಂಗಳವಾರ ಪ್ರಕಟಿಸಿದೆ. ರಾಜಧಾನಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಫ್ಲೈಓವರ್‌ಗಳನ್ನು ಸಕಾಲದಲ್ಲಿ ಪೂರ್ಣಗೊಳಿಸುವ ಮೂಲಕ ಉಳಿಸಿದ ಹಣದಿಂದ ಈ ಮಹತ್ವಾಕಾಂಕ್ಷಿ ಯೋಜನೆಗೆ ಹಣ ಒದಗಿಸಲಾಗುತ್ತದೆ ಎಂದು ದಿಲ್ಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಘೋಷಿಸಿದ್ದಾರೆ.
ದಿಲ್ಲಿಯ ಸರಕಾರಿ ಆಸ್ಪತ್ರೆಗಳಲ್ಲಿ ಎಂಆರ್‌ಐ ಸ್ಕಾನ್ ಪಡೆಯಬೇಕಾದರೆ ವರ್ಷಗಟ್ಟಲೆ ಕಾಯಬೇಕಾಗುತ್ತದೆ. 2019ರವರೆಗೂ ಕಾಯಲು ಈಗಾಗಲೇ ರೋಗಿಗಳಿಗೆ ಸೂಚನೆ ನೀಡಲಾಗಿದೆ ಎಂಬ ದೂರುಗಳು ಇವೆ. ಈ ಹಿನ್ನೆಲೆಯಲ್ಲಿ ಸಿಎಂ ಕೇಜ್ರೀವಾಲ್ ಅವರ ಸೂಚನೆಯಂತೆ ಹೊಸ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಫ್ಲೈಓವರ್‌ಗಳ ಸಕಾಲಿಕ ನಿರ್ಮಾಣದಿಂದ ಉಳಿದ ಹಣವನ್ನು ಬಡ ರೋಗಿಗಳಿಗೆ ಉಚಿತ ಔಷಧ ಒದಗಿಸಲು ಮತ್ತು ವೈದ್ಯಕೀಯ ತಪಾಸಣೆಗಳಿಗೆ ಬಳಸಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ದಿಲ್ಲಿಯಲ್ಲಿ ಉದ್ದೇಶಿತ ಫ್ಲೈಓವರ್‌ಗಳ ನಿರ್ಮಾಣವನ್ನು ಸಕಾಲಿಕವಾಗಿ ಮುಗಿಸಿದರೆ, 350 ಕೋಟಿ ರೂಪಾಯಿ ಉಳಿತಾಯವಾಗಲಿದೆ. ಇದು ಮಂಜೂರಾದ ಬಜೆಟ್‌ಗಿಂತ ಕಡಿಮೆ ವೆಚ್ಚದಲ್ಲಿ ಆಗಲಿದೆ. ಈ ಹಣವನ್ನು ಆರೋಗ್ಯ ಸೇವೆಗೆ ಬಳಸಿಕೊಳ್ಳಲಾಗುತ್ತದೆ ಎಂದು ಅವರು ಹೇಳಿದ್ದಾರೆ.







