ಇಸ್ತಾಂಬುಲ್ ಫುಟ್ಬಾಲ್ ಸ್ಟೇಡಿಯಮ್ ಸಮೀಪ ಅವಳಿ ಬಾಂಬು ಸ್ಫೋಟ
29 ಮಂದಿ ಸಾವು, 166 ಜನರಿಗೆ ಗಾಯ

ಇಸ್ತಾಂಬುಲ್, ಡಿ.11: ಇಲ್ಲಿನ ಇಸ್ತಾಂಬುಲ್ ಫುಟ್ಬಾಲ್ ಸ್ಟೇಡಿಯಮ್‌ನ ಸಮೀಪ ಸಂಭವಿಸಿದ ಅವಳಿ ಬಾಂಬು ಸ್ಫೋಟದಲ್ಲಿ 29 ಮಂದಿ ಸಾವನ್ನಪ್ಪಿದ್ದು, ಇತರ 166 ಮಂದಿ ಗಾಯಗೊಂಡಿದ್ದಾರೆ. ಪೊಲೀಸರನ್ನು ಗುರಿಯಾಗಿಸಿ ಬಾಂಬು ಸ್ಫೋಟ ನಡೆಸಲಾಗಿದ್ದು, ಮೃತರ ಪೈಕಿ 27 ಮಂದಿ ಪೊಲೀಸರು ಹಾಗೂ ಇಬ್ಬರು ನಾಗರಿಕರು ಸೇರಿದ್ದಾರೆ.
ನೂತನವಾಗಿ ನಿರ್ಮಾಣಗೊಂಡಿರುವ ವಡಾಪೋನ್ ಅರೆನಾ ಫುಟ್ಬಾಲ್ ಸ್ಟೇಡಿಯಮ್‌ನಲ್ಲಿ ಫುಟ್ಬಾಲ್ ಪಂದ್ಯ ಮುಗಿದ ಬಳಿಕ ಸ್ಟೇಡಿಯಂನ ಹೊರಭಾಗದಲ್ಲಿ ಸ್ಫೋಟ ನಡೆದಿತ್ತು. ಸ್ಫೋಟ ನಡೆದ ವೇಳೆ ಫುಟ್ಬಾಲ್ ಅಭಿಮಾನಿಗಳು ಸ್ಟೇಡಿಯಂನಿಂದ ತೆರಳಿದ್ದ ಕಾರಣ ಅವರೆಲ್ಲಾ ಅಪಾಯದಿಂದ ಪಾರಾಗಿದ್ದಾರೆ.
ಫುಟ್ಬಾಲ್ ಸ್ಟೇಡಿಯಂನ ಹೊರಗೆ ಮೊದಲಿಗೆ ಪೊಲೀಸರನ್ನು ಗುರಿಯಾಗಿರಿಸಿ ಕಾರು ಬಾಂಬು ದಾಳಿ ನಡೆದಿತ್ತು. ಕೆಲವೇ ನಿಮಿಷದ ಬಳಿಕ ಪಾರ್ಕ್‌ನ ಸಮೀಪ ಆತ್ಮಹತ್ಯಾ ಬಾಂಬರ್‌ವೊಬ್ಬ ಸ್ಫೋಟಿಸಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಬಾಂಬುಸ್ಫೋಟದಲ್ಲಿ ಮೃತಪಟ್ಟವರಲ್ಲಿ ಪೊಲೀಸರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ‘ಭಯೋತ್ಪಾದಕ ದಾಳಿಗೆ ಸಂಬಂಧಿಸಿ 10 ಜನರನ್ನು ಬಂಧಿಸಲಾಗಿದೆ ಎಂದು ಟರ್ಕಿಯ ಆಂತರಿಕ ಸಚಿವ ಸುಲೈಮಾನ್ ಸೊಯಿಲು ತಿಳಿಸಿದ್ದಾರೆ.
ಬಾಂಬುಸ್ಫೋಟ ನಡೆದ ತಕ್ಷಣ ರಕ್ಷಣಾ ಕಾರ್ಯಾಚರಣೆ ಪಡೆ ಹಾಗೂ ಆ್ಯಂಬುಲೆನ್ಸ್‌ಗಳು ಘಟನಾ ಸ್ಥಳಕ್ಕೆ ಧಾವಿಸಿವೆ.







