ತನ್ನದೇ ಸಹಿಯನ್ನು ಪೋರ್ಜರಿ ಎಂದು ನಾಲಿಗೆ ಕಚ್ಚಿಕೊಂಡ ಕೇಂದ್ರ ಸಚಿವ!
ಗಡ್ಕರಿ ಹೇರಾಪೇರಿ

ಹೊಸದಿಲ್ಲಿ, ಡಿ.11: ಗಡ್ಕರಿ ಸಹಿಯನ್ನು ಪೋರ್ಜರಿ ಮಾಡಲಾಗಿದೆ ಎಂಬ ಪ್ರಕರಣ ಬೆಳಕಿಗೆ ಬಂದು ಐದು ತಿಂಗಳ ಬಳಿಕ, ಆ ಪತ್ರಕ್ಕೆ ತಾವೇ ಸಹಿ ಮಾಡಿರುವುದಾಗಿ ಕೇಂದ್ರ ಹೆದ್ದಾರಿ ಹಾಗೂ ಭೂ ಸಾರಿಗೆ ಖಾತೆ ಸಚಿವ ನಿತಿನ್ ಗಡ್ಕರಿ ಒಪ್ಪಿಕೊಂಡಿದ್ದಾರೆ. ಈ ಮೂಲಕ ತಮ್ಮದೇ ಸಹಿಯನ್ನು ತಾವೇ ಪೋರ್ಜರಿ ಎಂದು ಹೇಳಿಕೊಂಡಿರುವ ವಿಲಕ್ಷಣ ಪ್ರಕರಣ ಬೆಳಕಿಗೆ ಬಂದಂತಾಗಿದೆ.
ಸಚಿವರ ಖಾಸಗಿ ಕಾರ್ಯದರ್ಶಿ ನೀಡಿದ ದೂರಿನ ಮೇರೆಗೆ ಸಿಬಿಐ ಅಧಿಕಾರಿಗಳು ಎಫ್ ಐಆರ್ ದಾಖಲಿಸಿಕೊಂಡಿದ್ದರು. ಸಚಿವರ ಹೆಸರಿನಲ್ಲಿ ನಕಲಿ ಸಹಿ ಮಾಡಿ, ಸುಳ್ಳುಪತ್ರ ಬರೆಯಲಾಗಿದೆ ಎಂದು ಪ್ರಕರಣ ದಾಖಲಾಗಿತ್ತು.
ಆದರೆ ಇದೀಗ ಗಡ್ಕರಿ, ಸಿಬಿಐಗೆ ನೀಡಿದ ಹೇಳಿಕೆಯಲ್ಲಿ, ಆ ಪತ್ರ ಹಾಗೂ ಸಹಿ ತಮ್ಮದೇ ಎಂದು ದೃಢಪಡಿಸಿದ್ದಾರೆ. ವೈಯಕ್ತಿಕ ಕಾರ್ಯದರ್ಶಿಯವರು ನಾಗ್ಪುರ ಕ್ಯಾಂಪ್ ಆಫೀಸ್ ಕಡತಗಳನ್ನು ಪರಿಶೀಲಿಸದೇ, ದೂರು ಸಲ್ಲಿಸಿದ್ದಾಗಿ ಗಡ್ಕರಿ ಇದೀಗ ಹೊಸ ವರಸೆ ಶುರು ಮಾಡಿದ್ದಾರೆ. ಆ ದಾಖಲೆಗಳನ್ನು ಅವರು ಪರಿಶೀಲಿಸಿದ್ದರೆ, ದೂರು ನೀಡುತ್ತಿರಲಿಲ್ಲ ಎಂದು ಗಡ್ಕರಿ ಸ್ಪಷ್ಟಪಡಿಸಿದ್ದಾರೆ.
ಧನ ಕ್ರಮಶಹ್ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಕೋರಿ ಪ್ರಧಾನಿ ಕಚೇರಿಗೆ ಸಲ್ಲಿಕೆಯಾಗಿದ್ದ ಪತ್ರ ನಕಲಿ ಎಂದು ಗಡ್ಕರಿಯವರ ಆಪ್ತ ಕಾರ್ಯದರ್ಶಿ ವೈವ ಡ್ಯಾಂ ಗೆ ಸಿಬಿಐಗೆ ದೂರು ನೀಡಿದ್ದರು.







