ಅಲ್ಪಸಂಖ್ಯಾತ ಆರೋಪಿಗಳಿಗೆ ಬೇರೆಯೇ ಮಾನದಂಡ: ದಿಲ್ಲಿ ಹೈಕೋರ್ಟ್ ಮಾಜಿ ನ್ಯಾಯಾಧೀಶ ಶಾ
ಅವರ ಪ್ರಕಾರ ಆರೋಪಿಗಳ ಧರ್ಮ ನೋಡಿ ಏನು ಮಾಡಲಾಗುತ್ತಿದೆ?

ಹೊಸದಿಲ್ಲಿ, ಡಿ.11: ಅಲ್ಪಸಂಖ್ಯಾತ ಹಾಗೂ ಬಹುಸಂಖ್ಯಾತ ಸಮುದಾಯಗಳಿಗೆ ಸೇರಿದ ಆರೋಪಿಗಳ ವಿಚಾರಣೆ ವೇಲೆ ವಿಭಿನ್ನ ಮಾನದಂಡ ಅನುಸರಿಸಲಾಗುತ್ತಿದೆ ಎಂಬ ಅಂಶವನ್ನು ದಿಲ್ಲಿ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎ.ಪಿ.ಶಾ ಶನಿವಾರ ಬಹಿರಂಗಪಡಿಸಿದ್ದಾರೆ.
ನಿರ್ದಿಷ್ಟ ಸಮುದಾಯದ ಜನರ ವಿರುದ್ಧ ಭಯೋತ್ಪಾದಕ ಆರೋಪ ಪ್ರಕರಣಗಳಲ್ಲಿ ಪುರಾವೆಗಳನ್ನು ಸೃಷ್ಟಿಸುವಲ್ಲಿ ಮಾನಹಾನಿಕರ ವಿಚಾರಣೆ ಹಾಗೂ ತನಿಖಾ ಸಂಸ್ಥೆಗಳ ಪಾತ್ರ ಎಂಬ ವಿಷಯದ ಬಗ್ಗೆ ಅವರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ಮಾಲೆಗಾಂವ್ ಸ್ಪೋಟದ ವಿಚಾರಣೆ ವೇಳೆ ಬಹುಸಂಖ್ಯಾತ ಸಮುದಾಯದ ಆರೋಪಿಗಳ ವಿರುದ್ಧ ಮೆದು ನೀತಿ ಅನುಸರಿಸುವಂತೆ ವಕೀಲರಿಗೆ ಸೂಚಿಸಲಾಗಿದೆ ಎಂಬ ವಿಷಯವನ್ನು ನ್ಯಾಯಮೂರ್ತಿ ಪ್ರಸ್ತಾಪಿಸಿದರು. ಇಂಥ ಆರೋಪಿಗಳ ವಿರುದ್ಧ ಸುಳ್ಳು ಆರೋಪ ಹೊರಿಸಲಾಗಿದೆ ಎಂಬ ನೆಪ ನೀಡಿ ಅವರಿಗೆ ಸೂಕ್ತ ಪರಿಹಾರ ಒದಗಿಸಿಕೊಡುವ ಅಥವಾ ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸರಕಾರ ಮುಂದಾಗುತ್ತದೆ ಎಂದು ಆಪಾದಿಸಿದರು.
ನಾಗರಿಕ ಹಾಗೂ ರಾಜಕೀಯ ಹಕ್ಕುಗಳ ಕುರಿತ ಅಂತಾರಾಷ್ಟ್ರೀಯ ಒಪ್ಪಂದಕ್ಕೆ 60 ವರ್ಷ ಹಿಂದೆಯೇ ಸಹಿ ಮಾಡಿದ್ದರೂ, ಇದಕ್ಕೆ ಅಗತ್ಯವಾದ ಶಾಸನವನ್ನು ಸರಕಾರ ರೂಪಿಸಿಲ್ಲ. ಪೊಲೀಸ್ ಸುಧಾರಣೆಗಳ ವಿಚಾರ ಏನಾಗಿದೆ? ಈ ಬಗ್ಗೆ ಸುಪ್ರೀಂಕೋರ್ಟ್ ಆದೇಶ ನೀಡಿಯೇ 20 ವರ್ಷ ಕಳೆದಿದೆ ಎಂದು ವಿವರಿಸಿದರು.
"ದೋಷಮುಕ್ತರಾದ ಅಮಾಯಕರಿಗೆ ಜನರ ಗೌರವ" ಎಂಬ ವರದಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಭಯೋತ್ಪಾದಕ ಆರೋಪದಲ್ಲಿ ಜನರನ್ನು ಆರೋಪಮುಕ್ತಗೊಳಿಸುವಲ್ಲಿ ಮತ್ತು ಪರಿಹಾರ ನೀಡುವ ವಿಚಾರದಲ್ಲಿ ನ್ಯಾಯಮೂರ್ತಿಗಳು ಹಿಂಜರಿಯುವ ಹಾಗೂ ಪಕ್ಷಪಾತದ ಮನೋಭಾವ ಹೊಂದಿದ್ದಾರೆ ಎಂದು ಆಪಾದಿಸಿದರು. ಸುಳ್ಳು ಪುರಾವೆಗಳನ್ನು ಸೃಷ್ಟಿಸಲಾಗಿದೆ ಎಂಬುದು ಖಚಿತವಾದ ಬಳಿಕ ಅಂಥ ಪೊಲೀಸ್ ಅಧಿಕಾರಿಗಳ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದು ಅಕ್ಷರಧಾಮ ತೀರ್ಪು ನೀಡಿದ ನ್ಯಾಯಪೀಠವನ್ನು ಕೇಳಬಯಸುತ್ತೇನೆ ಎಂದು ಹೇಳಿದರು.







