ಟೆಸ್ಟ್ ತಂಡದ ನಾಯಕನಾಗಿ ಕೊಹ್ಲಿ ಹೊಸ ದಾಖಲೆ

ಮುಂಬೈ, ಡಿ.11: ಇಂಗ್ಲೆಂಡ್ ವಿರುದ್ಧ ಇಲ್ಲಿ ನಡೆಯುತ್ತಿರುವ ನಾಲ್ಕನೆ ಟೆಸ್ಟ್ ಪಂದ್ಯದಲ್ಲಿ ಮೂರನೆ ಬಾರಿ ದ್ವಿಶತಕ ಬಾರಿಸಿದ ಭಾರತದ ನಾಯಕ ವಿರಾಟ್ ಕೊಹ್ಲಿ ಹೊಸ ದಾಖಲೆ ಬರೆದರು.
ಕೊಹ್ಲಿ(235 ರನ್, 340 ಎಸೆತ, 25 ಬೌಂಡರಿ, 1 ಸಿಕ್ಸರ್) ಮೂರು ದ್ವಿಶತಕ ಬಾರಿಸಿದ ಭಾರತದ ಮೊದಲ ಟೆಸ್ಟ್ ತಂಡದ ನಾಯಕನೆಂಬ ಕೀರ್ತಿಗೆ ಭಾಜನರಾದರು. ಕೊಹ್ಲಿ ಮೂರು ದ್ವಿಶತಕವನ್ನು ಮೂರು ಟೆಸ್ಟ್ ಸರಣಿಯಲ್ಲಿ ದಾಖಲಿಸಿರುವುದು ಮತ್ತೊಂದು ವಿಶೇಷ. ಈ ವರ್ಷದ ಜುಲೈನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಚೊಚ್ಚಲ ದ್ವಿಶತಕ(200) ಗಳಿಸಿದ್ದ ಕೊಹ್ಲಿ ಅಕ್ಟೋಬರ್‌ನಲ್ಲಿ ನ್ಯೂಝಿಲೆಂಡ್ ವಿರುದ್ಧ ಸ್ವದೇಶಿ ಸರಣಿಯಲ್ಲಿ ಎರಡನೆ ಬಾರಿ ದ್ವಿಶತಕ(211) ಬಾರಿಸಿದ್ದರು. ಆಂಗ್ಲರ ವಿರುದ್ಧ 235 ರನ್ ಗಳಿಸಿರುವ ಕೊಹ್ಲಿ ಅವರು ಟೆಸ್ಟ್ ಇತಿಹಾಸದಲ್ಲಿ ಸತತ 3 ಸರಣಿಯಲ್ಲಿ ದ್ವಿಶತಕ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.
ಕೊಹ್ಲಿ ಕ್ಯಾಲೆಂಡರ್ ವರ್ಷದಲ್ಲಿ ಮೂರು ದ್ವಿಶತಕ ಬಾರಿಸಿದ ವಿಶ್ವದ ಐದನೆ ಬ್ಯಾಟ್ಸ್‌ಮನ್. ಆಸ್ಟ್ರೇಲಿಯ ದಂತಕತೆ ಡಾನ್ ಬ್ರಾಡ್ಮನ್(3), ಆಸೀಸ್‌ನ ಮಾಜಿ ನಾಯಕ ರಿಕಿ ಪಾಂಟಿಂಗ್(3), ಮೈಕಲ್ ಕ್ಲಾರ್ಕ್(4) ಹಾಗೂ ನ್ಯೂಝಿಲೆಂಡ್‌ನ ಬ್ರೆಂಡನ್ ಮೆಕಲಮ್(3) ಈ ಸಾಧನೆ ಮಾಡಿದ್ದರು. ಕ್ಲಾರ್ಕ್(2012)ಹಾಗೂ ಮೆಕಲಮ್(2014) ಬಳಿಕ ಈ ಸಾಧನೆ ಮಾಡಿರುವ 3ನೆ ಟೆಸ್ಟ್ ನಾಯಕ ಕೊಹ್ಲಿ.
235 ರನ್ ಕೊಹ್ಲಿ ಅವರ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. ಭಾರತದ ನಾಯಕನಾಗಿಯೂ ಗರಿಷ್ಠ ಸ್ಕೋರ್ ದಾಖಲಿಸಿದ ಕೊಹ್ಲಿ ಮಾಜಿ ಟೆಸ್ಟ್ ನಾಯಕ ಎಂಎಸ್ ಧೋನಿ ದಾಖಲೆಯನ್ನು ಮುರಿದರು. ಧೋನಿ 2013ರಲ್ಲಿ ಆಸ್ಟ್ರೇಲಿಯ ವಿರುದ್ಧ 224 ರನ್ ಗಳಿಸಿದ್ದರು.
9ನೆ ಕ್ರಮಾಂಕದಲ್ಲಿ ಚೊಚ್ಚಲ ಶತಕ ಬಾರಿಸಿದ ಜಯಂತ್ ಯಾದವ್ ಅವರೊಂದಿಗೆ 8ನೆ ವಿಕೆಟ್‌ಗೆ 241 ರನ್ ಜೊತೆಯಾಟ ನಡೆಸಿದ ಕೊಹ್ಲಿ ಇನ್ನೊಂದು ದಾಖಲೆ ಬರೆದರು. ಭಾರತ ತಂಡ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ 8ನೆ ವಿಕೆಟ್‌ನಲ್ಲಿ ದಾಖಲಿಸಿರುವ ಗರಿಷ್ಠ ಜೊತೆಯಾಟ ಇದಾಗಿದೆ.







