ಸೋಮಾಲಿಯಾದಲ್ಲಿ ಆತ್ಮಹತ್ಯಾ ಬಾಂಬ್ ಸ್ಫೋಟ,16 ಜನರ ಸಾವು

ಮೊಗಾದಿಶು,ಡಿ.11: ಸೋಮಾಲಿಯಾದ ರಾಜಧಾನಿ ಮೊಗಾದಿಶುವಿನ ಬಂದರಿನ ಪ್ರವೇಶದ್ವಾರದ ಬಳಿಇಂದು ಬೆಳಿಗ್ಗೆ ಟ್ರಕ್ ಬಾಂಬ್ ಸ್ಫೋಟಿಸಿ ಕನಿಷ್ಠ 16 ಜನರು ಕೊಲ್ಲಲ್ಪಟ್ಟಿದ್ದಾರೆ.
ಘಟನೆಯಲ್ಲಿ 48 ಜನರು ಗಾಯಗೊಂಡಿದ್ದು ,ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಜೊತೆಗೆ 16 ಶವಗಳನ್ನೂ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಆ್ಯಂಬುಲನ್ಸ್ ಸೇವೆಗಳ ನಿರ್ದೇಶಕ ಅಬ್ದಿಕಾದಿರ್ ಅಬ್ದಿರಹ್ಮಾನ್ ಆದೆಮ್ ತಿಳಿಸಿದರು.
ಸ್ಫೋಟದಿಂದ ಉಂಟಾದ ಭಾರೀ ಶಬ್ದವು ಇಡೀ ನಗರಕ್ಕೆ ಕೇಳಿಸಿತ್ತು ಮತ್ತು ದಟ್ಟವಾದ ಹೊಗೆ ಆಕಾಶದಲ್ಲಿ ವ್ಯಾಪಿಸಿತ್ತು ಎಂದು ಸ್ಥಳೀಯ ನಿವಾಸಿಗಳು ತಿಳಿಸಿದರು.
ಸ್ಫೋಟ ಸಂಭವಿಸಿರುವುದನ್ನು ನಗರಾಡಳಿತದ ವಕ್ತಾರ ಅಬ್ದಿಫತ್ಹಾ ಉಮರ್ ಹಲನೇ ದೃಢಪಡಿಸಿದರೂ,ಹತ್ತು ಜನರು ಮೃತಪಟ್ಟಿದ್ದಾರೆ ಎಂದು ತಿಳಿಸಿದರು.
ಅಲ್-ಕಾಯದಾ ಜೊತೆ ನಂಟು ಹೊಂದಿರುವ ಶಾಬಾದ್ ಉಗ್ರಗಾಮಿ ಗುಂಪು ಸ್ಫೋಟದ ಹೊಣೆಯನ್ನು ಹೊತ್ತುಕೊಂಡಿದೆ. ಬಂದರಿಗೆ ಸಮೀಪವಿರುವ ಸೇನಾನೆಲೆ ದಾಳಿಯ ಗುರಿಯಾಗಿತ್ತು ಎಂದಿರುವ ಅದು, ಕನಿಷ್ಠ 30 ಜನರು ಕೊಲ್ಲಲ್ಪಟ್ಟಿದ್ದಾರೆ ಎಂದು ಹೇಳಕೊಂಡಿದೆ. ಈ ಗುಂಪು ತನ್ನ ದಾಳಿಯಲ್ಲಿ ಕೊಲ್ಲಲ್ಲಟ್ಟವರ ಸಂಖ್ಯೆಯನ್ನು ಉತ್ಪ್ರೇಕ್ಷಿಸಿ ಹೇಳುವುದು ಸಾಮಾನ್ಯವಾಗಿದೆ.
ಶಾಬಾದ್ ಉಗ್ರಗಾಮಿ ಗುಂಪು ಅಂತಾರಾಷ್ಟ್ರೀಯ ಬೆಂಬಲ ಹೊಂದಿರುವ ಸೋಮಾಲಿಯಾ ಸರಕಾರವನ್ನು ಪದಚ್ಯುತಗೊಳಿಸಲು ಹೋರಾಡುತ್ತಿದೆ. ಅದು ಮೊಗಾದಿಶು ಮತ್ತು ಈ ಯುದ್ಧಗ್ರಸ್ತ ದೇಶದ ಇತರೆಡೆಗಳಲ್ಲಿ ಆಗಾಗ್ಗೆ ಸರಕಾರ,ಸೇನೆ ಮತ್ತು ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿಗಳನ್ನು ನಡೆಸುತ್ತಿರುತ್ತದೆ.
ಸೋಮಾಲಿಯಾದಲ್ಲಿ ಬಹು ವಿಳಂಬಿತ ಅಧ್ಯಕ್ಷೀಯ ಚುನಾವಣೆ ಡಿ.28ರಂದು ನಡೆಯಲಿದೆ.







