ನೋಟುಗಳ ಕೊರತೆ ನೀಗಿಸಲು ಪ್ರೆಸ್‌ನಲ್ಲಿ ನಿವೃತ್ತ ನೌಕರರ ಪುನರ್‌ನೇಮಕ

ಭೋಪಾಲ್,ಡಿ.11: ನೋಟು ರದ್ದತಿಯಿಂದ ನಗದು ಹಣದ ಕೊರತೆಯಾಗಿರುವ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ದೇವಾಸ್‌ನಲ್ಲಿರುವ ನೋಟು ಮುದ್ರಣ ಘಟಕ(ಬಿಎನ್‌ಪಿ)ವು ಹೊಸ ನೋಟುಗಳಿಗೆ ಬೇಡಿಕೆಯನ್ನು ಪೂರೈಸಲು ತನ್ನ ನಿವೃತ್ತ ನೌಕರರನ್ನು ಮರುನೇಮಕ ಮಾಡಿಕೊಂಡಿದೆ.
ಘಟಕವು ನಿವೃತ್ತ ಮತ್ತು ಅನುಭವಿ ನೌಕರರ ನೆರವಿನೊಂದಿಗೆ ನೋಟುಗಳ ಮುದ್ರಣಕ್ಕಾಗಿ ದಿನದ 24 ಗಂಟೆಗಳ ಕಾಲ ಪೂರ್ಣ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ ಎಂದು ಬಿಎನ್‌ಪಿಯ ಹಿರಿಯ ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.
ಭಾರೀ ಸಂಖ್ಯೆಯಲ್ಲಿ ಹೊಸನೋಟುಗಳನ್ನು ದಿಲ್ಲಿ,ಚಂಡಿಗಡ ಕೋಲ್ಕತಾ, ಗುವಾಹಟಿ, ಕಾನ್ಪುರ,ಬೆಂಗಳೂರು, ಇಂದೋರ ಮತ್ತು ಭೋಪಾಲಗಳಿಗೆ ರವಾನಿಸಲಾಗಿದೆ ಎಂದು ಅವರು ತಿಳಿಸಿದರು.
ನೋಟು ರದ್ದತಿಗೆ ಮುನ್ನ ಈ ಘಟಕದಲ್ಲಿ 20,50,100 ಮತ್ತು 500 ರೂ.ನೋಟು ಗಳನ್ನು ಮುದ್ರಿಸಲಾಗುತ್ತಿತ್ತು. ಈಗ 500 ರೂ.ನೋಟುಗಳನ್ನು ಮಾತ್ರ ಮುದ್ರಿಸಲಾ ಗುತ್ತಿದೆ ಎಂದರು.
ನಿವೃತ್ತ ನೌಕರರನ್ನು ನೇಮಿಸಿಕೊಳ್ಳುವ ಜೊತೆಗೆ ಎಲ್ಲ ಸಿಬ್ಬಂದಿಗಳ ರಜೆಗಳು ಮತ್ತು ವಾರದ ರಜೆಗಳನ್ನು ರದ್ದುಗೊಳಿಸಲಾಗಿದೆ ಎಂದೂ ಅವರು ತಿಳಿಸಿದರು.





