ಅಜೇಯ ಗೆಲುವಿನ ದಾಖಲೆ ಕಾಯ್ದುಕೊಂಡ ರಿಯಲ್ ಮ್ಯಾಡ್ರಿಡ್

ಮ್ಯಾಡ್ರಿಡ್, ಡಿ.11: ನಾಯಕ ಸೆರ್ಜಿಯೊ ರಾಮೊಸ್ ಹೆಚ್ಚುವರಿ ಸಮಯದಲ್ಲಿ ಬಾರಿಸಿದ ಗೋಲು ನೆರವಿನಿಂದ ರಿಯಲ್ ಮ್ಯಾಡ್ರಿಡ್ ತಂಡ ಲಾ ಲಿಗ ಫುಟ್ಬಾಲ್ ಟೂರ್ನಿಯಲ್ಲಿ ಡೆಪೊರ್ಟಿವೊ ಲಾ ಕೊರುನ ತಂಡವನ್ನು 3-2 ಅಂತರದಿಂದ ರೋಚಕವಾಗಿ ಮಣಿಸಿತು.
ಈ ಗೆಲುವಿನ ಮೂಲಕ ಯುರೋಪಿಯನ್ ಚಾಂಪಿಯನ್ ಮ್ಯಾಡ್ರಿಡ್ ತಂಡ ಎಲ್ಲ ಸ್ಪರ್ಧೆಗಳಲ್ಲಿ ಸತತ 35ನೆ ಗೆಲುವನ್ನು ದಾಖಲಿಸಿ ಕ್ಲಬ್ ಫುಟ್ಬಾಲ್‌ನಲ್ಲಿ ಹೊಸ ದಾಖಲೆ ನಿರ್ಮಿಸಿದೆ.
ಶನಿವಾರ ಇಲ್ಲಿ ನಡೆದ ಪಂದ್ಯದಲ್ಲಿ 63 ಹಾಗೂ 65ನೆ ನಿಮಿಷದಲ್ಲಿ ಗೋಲು ಬಾರಿಸಿದ ಎದುರಾಳಿ ತಂಡದ ಆಟಗಾರ ಜೊಸೆಲು ರಿಯಲ್ ಮ್ಯಾಡ್ರಿಡ್‌ನ ಗೆಲುವಿನ ಓಟಕ್ಕೆ ಬ್ರೇಕ್ ಹಾಕುವ ಭೀತಿ ಹುಟ್ಟಿಸಿದ್ದರು. ಆದರೆ, ಹೆಚ್ಚುವರಿ ಸಮಯದಲ್ಲಿ(93ನೆ ನಿಮಿಷ) ಆಕರ್ಷಕ ಗೋಲು ಬಾರಿಸಿದ ರಾಮೊಸ್ ಮ್ಯಾಡ್ರಿಡ್‌ಗೆ ರೋಚಕ ಗೆಲುವು ತಂದುಕೊಟ್ಟರು.
ಸತತ 35ನೆ ಗೆಲುವು ಸಾಧಿಸಿರುವ ರಿಯಲ್ ಮ್ಯಾಡ್ರಿಡ್ ತಂಡ 1988-89ರ ಋತುವಿನಲ್ಲಿ ತಾನು ದಾಖಲಿಸಿದ್ದ ಸತತ 34 ಪಂದ್ಯಗಳ ಗೆಲುವಿನ ದಾಖಲೆಯನ್ನು ಮುರಿಯಿತು.
ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅನುಪಸ್ಥಿತಿಯಲ್ಲೂ ಉತ್ತಮ ಪ್ರದರ್ಶನ ನೀಡಿದ ಮ್ಯಾಡ್ರಿಡ್ ತಂಡ ಲಾಲಿಗ ಅಂಕಪಟ್ಟಿಯಲ್ಲಿ ಒಟ್ಟು 37 ಅಂಕ ಗಳಿಸಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಎರಡನೆ ಸ್ಥಾನದಲ್ಲಿರುವ ಬಾರ್ಸಿಲೋನ ತಂಡಕ್ಕಿಂತ ಆರು ಅಂಕಗಳಿಂದ ಮುಂದಿದೆ.
ರೋಚಕವಾಗಿ ಸಾಗಿದ ಪಂದ್ಯದಲ್ಲಿ ಮ್ಯಾಡ್ರಿಡ್ ತಂಡದ ಪರ ಮೊರಾಟ(50ನೆ ನಿಮಿಷ), ಮರಿಯಾನೊ(84ನೆ ನಿ.) ಹಾಗೂ ರಾಮೊಸ್(93ನೆ ನಿ.) ತಲಾ ಒಂದು ಗೋಲು ಬಾರಿಸಿದರು. ಡೆಪೊರ್ಟಿವೊ ತಂಡದ ಪರ ಜೊಸೆಲು(63ನೆ, 65ನೆ ನಿ.) ಅವಳಿ ಗೋಲು ಬಾರಿಸಿದ್ದರು.
‘‘ನಾವು ಕೊನೆಯ ತನಕ ಹೋರಾಟ ನೀಡಿದರೆ ಇಂತಹದ್ದೆಲ್ಲವೂ ನಡೆಯಲು ಸಾಧ್ಯ. ನಮ್ಮ ತಂಡದ ಉತ್ತಮ ಪ್ರದರ್ಶನ ನೀಡಲಿಲ್ಲ. ನಾವು ಮಾಡಿರುವ ತಪ್ಪು ದುಬಾರಿಯಾಯಿತು. ಅಂತಿಮವಾಗಿ ಎಲ್ಲವನ್ನೂ ಸರಿಪಡಿಸಿಕೊಂಡಿದ್ದೇವೆ’’ ಎಂದು ಕಳೆದ ವಾರ ಬಾರ್ಸಿಲೋನದ ವಿರುದ್ಧ ಕೊನೆಯ ನಿಮಿಷದಲ್ಲಿ ಗೋಲು ಬಾರಿಸಿದ್ದ ರಾಮೊಸ್ ಪ್ರತಿಕ್ರಿಯಿಸಿದರು.
‘‘ಸತತ 35 ಪಂದ್ಯಗಳಲ್ಲಿನ ಗೆಲುವು ಮಾನಸಿಕವಾಗಿ ಹೆಚ್ಚು ನೆರವಿಗೆ ಬರುತ್ತದೆ. ಸೆರ್ಜಿಯೊ ರಾಮೊಸ್ ಪ್ರತಿಬಾರಿಯೂ ಕೊನೆಯ ಕ್ಷಣದಲ್ಲಿ ಪಂದ್ಯಕ್ಕೆ ತಿರುವು ನೀಡುವ ಕಾರಣ ಅವರು ನಮ್ಮ ತಂಡದಲ್ಲಿರುವ ವಿಶೇಷ ಆಟಗಾರ. ಅವರ ಈ ರೀತಿಯ ಪ್ರದರ್ಶನ ಇದೇ ಮೊದಲಲ್ಲ’’ ಎಂದು ಕೋಚ್ ಝೈನುದ್ದೀನ್ ಝೈದಾನ್ ಹೇಳಿದ್ದಾರೆ.







