ಅಬಕಾರಿ ಸಚಿವ ಮೇಟಿ ವಿರುದ್ಧ ರಾಸಲೀಲೆ, ಜೀವಬೆದರಿಕೆ ಆರೋಪ

ಬೆಂಗಳೂರು, ಡಿ.11: ರಾಜ್ಯ ಸಚಿವ ಅಬಕಾರಿ ಸಚಿವ ಎಚ್.ವೈ ಮೇಟಿ ವಿರುದ್ಧ ರಾಸಲೀಲೆ ಆರೋಪ ಕೇಳಿ ಬಂದಿದ್ದು, ಇದರೊಂದಿಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರಕ್ಕೆ ಮತ್ತೊಂದು ಗಂಡಾಂತರ ಎದುರಾಗಿದೆ.
ತನ್ನ ಬಳಿಗೆ ಸಹಾಯಯಾಚಿಸಿ ಬಂದಿದ್ದ ಯುವತಿಯೊಂದಿಗೆ 70ರ ಹರೆಯದ ಸಚಿವ ಎಚ್‌ವೈ ಮೇಟಿ ರಾಸಲೀಲೆ ನಡೆಸಿರುವುದಾಗಿ ಬಳ್ಳಾರಿ ಮೂಲದ ಆರ್ ಟಿಎ ಕಾರ್ಯಕರ್ತ ರಾಜಶೇಖರ್ ಎಂಬವರು ಆರೋಪ ಮಾಡಿದ್ದಾರೆ. ಸಚಿವರ ರಾಸಲೀಲೆಯ ದೃಶ್ಯಗಳನ್ನು ರಹಸ್ಯ ಕ್ಯಾಮರಾದಲ್ಲಿ ಚಿತ್ರೀಕರಿಸಿದ ಸಿಡಿಯನ್ನು ಬಿಡುಗಡೆ ಮಾಡದಂತೆ ಸಚಿವರ ಬೆಂಬಲಿಗರು ತನಗೆ ಬೆದರಿಕೆ ಹಾಕಿರುವುದಾಗಿ ರಾಜಶೇಖರ‍್ ಹೇಳಿದ್ದಾರೆ.
ಈ ಆರೋಪವನ್ನು ಅಲ್ಲಗಳೆದಿರುವ ಸಚಿವ ಎಚ್‌ವೈ ಮೇಟಿ "ನನಗೆ ಯಾವುದೇ ಅಂಜಿಕೆ, ಅಳುಕು ಇಲ್ಲ. ನನ್ನ ವಿರುದ್ಧ ಆರ್ ಟಿಎ ಕಾರ್ಯಕರ್ತ ರಾಜಶೇಖರ‍್ ಷಡ್ಯಂತ್ರ ಮಾಡಲು ತೀರ್ಮಾನಿಸಿದ್ದಾರೆ. ಅವರಲ್ಲಿ ನನ್ನ ಬಗ್ಗೆ ವೀಡಿಯೋ ಮತ್ತು ಸಿಡಿ ಇದ್ದರೆ ಕೂಡಲೇ ಬಿಡುಗಡೆ ಮಾಡಲಿ ”ಎಂದು ಬಾಗಲಗೋಟೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಸಚಿವರ ವಿರುದ್ಧದ ರಾಸಲೀಲೆ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು, ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಅಬಕಾರಿ ಸಚಿವ ಎಚ್.ವೈ.ಮೇಟಿ ವಿರುದ್ಧದ ರಾಸಲೀಲೆ ಸಿಡಿ ಮತ್ತು ಜೀವ ಬೆದರಿಕೆ ಆರೋಪ ಸಾಬೀತಾದರೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಿದೆ.ಸಚಿವರ ರಾಜಿನಾಮೆ ಪಡೆಯುವುದು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ ” ಎಂದು ಹೇಳಿದ್ದಾರೆ.







