ಅಂಗನವಾಡಿ ನೌಕರರ ಬಗ್ಗೆ ಸರಕಾರದ ದ್ವಿಮುಖ ನೀತಿ: ವರಲಕ್ಷ್ಮೀ
ಉಡುಪಿ ಜಿಲ್ಲಾ ಅಂಗನವಾಡಿ ನೌಕರರ ಹೋರಾಟ ಸಮಾವೇಶ

ಉಡುಪಿ, ಡಿ.11: ಅಂಗನವಾಡಿ ನೌಕರರ ಬಗ್ಗೆ ರಾಜ್ಯ ಸರಕಾರ ದ್ವಿಮುಖ ನೀತಿ ಅನುಸರಿಸುತ್ತಿದೆ. ಇವರು ಸೌಲಭ್ಯ ಕೇಳಿದಾಗ ಗೌರವ ಕಾರ್ಯಕರ್ತರು, ಕೆಲಸದ ವಿಚಾರದಲ್ಲಿ ಸರಕಾರಿ ನೌಕರರು. ಹೀಗಾಗಿ ಅಂಗನವಾಡಿ ನೌಕರರಿಗೆ ಸೇವಾ ನಿಯಮಾವಳಿ ರಚಿಸಬೇಕು ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಸ್.ವರಲಕ್ಷ್ಮೀ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ರವಿವಾರ ಅಂಬಲಪಾಡಿ ದೇವಸ್ಥಾನದ ಭವಾನಿ ಮಂಟಪದಲ್ಲಿ ಆಯೋಜಿಸಲಾದ ಉಡುಪಿ ಜಿಲ್ಲಾ ಅಂಗನವಾಡಿ ನೌಕರರ ಹೋರಾಟ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕನಿಷ್ಠ ವೇತನ ನೀಡುವ ವಿಚಾರದಲ್ಲಿ ರಾಜ್ಯ ಸರಕಾರ ಕೇಂದ್ರದ ಮೇಲೆ, ಕೇಂದ್ರ ಸರಕಾರ ರಾಜ್ಯದ ಮೇಲೆ ಗೂಬೆ ಕೂರಿಸಿ ಅಂಗನವಾಡಿ ನೌಕರರನ್ನು ಅತಂತ್ರವನ್ನಾಗಿಸಿದ್ದಾರೆ. ಅಂಗನವಾಡಿ ಕೇಂದ್ರಗಳು ಒಂದೆಡೆ ಖಾಸಗೀಕರಣ ಇನ್ನೊಂದೆಡೆ ಮುಚ್ಚುವ ಬಿಕ್ಕಟ್ಟಿನ ಸ್ಥಿತಿಯಲ್ಲಿವೆ. ಇವುಗಳ ಮಧ್ಯೆ ನೌಕರರ ಉಳಿವಿಗಾಗಿ ಹೋರಾಟ ಮಾಡಬೇಕಾಗಿದೆ ಎಂದರು.
ರಾಜ್ಯದಲ್ಲಿ ಒಟ್ಟು ಇರುವ 60ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ ಶೇ.50ರಷ್ಟು ಕೇಂದ್ರಗಳಿಗೆ ಸ್ವಂತ ಕಟ್ಟಡವೇ ಇಲ್ಲ.
ನಾದುರಸ್ತಿಯಲ್ಲಿರುವ ಕಟ್ಟಡಗಳಿಗೆ ಇನ್ನು ದುರಸ್ತಿ ಭಾಗ್ಯ ದೊರೆತಿಲ್ಲ. ಆದರೂ ಅಂಗನವಾಡಿ ನೌಕರರು ಇಂದು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಇವರನ್ನು ಕನಿಷ್ಠ ಕೂಲಿ ಕಾಯಿದೆಯಡಿ ಸೇರಿಸಬೇಕು ಮತ್ತು ಕೆಲಸದ ಖಾಯಮಾತಿ, ಭವಿಷ್ಯ ನಿಧಿ, ಪಿಂಚಣಿ, ಸಾಮಾಜಿಕ ಭದ್ರತೆಯನ್ನು ಒದಗಿಸಬೇಕು ಎಂದು ಅವರು ಆಗ್ರಹಿಸಿದರು.
ಅಂಗನವಾಡಿ ನೌಕರರು ತಮ್ಮ ಸೇವೆಯ ಮೂಲಕ ಸಮಾಜವನ್ನು ಮುನ್ನಡೆಸುತ್ತಿದ್ದಾರೆ. ಆದರೆ ಇವರ ಸೇವೆಯನ್ನು ಪ್ರಭುತ್ವ ಹಾಗೂ ಸಮಾಜ ನಿರ್ಲಕ್ಷಿಸುತ್ತಿದೆ. ಈ ಸೇವೆಗೆ ಯಾವುದೇ ಗೌರವ, ಸರಿಯಾದ ಕೂಲಿ ಇಲ್ಲವಾಗಿದೆ. ನೌಕರರನ್ನು ಸ್ವಯಂ ಸೇವಕರು ಎಂದು ಪರಿಗಣಿಸಿ ಇವರ ಸೇವೆಯನ್ನೇ ಅವಮಾನ ಮಾಡಲಾಗುತ್ತಿದೆ ಎಂದು ಅವರು ದೂರಿದರು.
ನರೇಗಾ ಯೋಜನೆಯಲ್ಲಿ ದಿನಕ್ಕೆ 272 ರೂ. ಕೂಲಿ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಆದರೆ ಅಂಗನನಾಡಿ ನೌಕರರಿಗೆ ದಿನಕ್ಕೆ 200ರೂ.ನಂತೆ ತಿಂಗಳಿಗೆ 6000ರೂ. ಗೌರವಧನ ನೀಡಲಾಗುತ್ತಿದೆ. ಇವರ ಕೆಲಸ ನರೇಗಾ ಯೋಜನೆಯವರ ಕೆಲಸಕ್ಕಿಂತ ಹೆಚ್ಚಿದ್ದರೂ ಕೂಲಿ ಮಾತ್ರ ಕಡಿಮೆ. ಅಂಗನವಾಡಿ ನೌಕರರಿಗೆ ತಮಿಳುನಾಡಿನಲ್ಲಿ ಡಿಎ ನೀಡಿದರೆ, ಕೇರಳದಲ್ಲಿ ಅವರ ವೇತನವನ್ನು 4ಸಾವಿರ ರೂ. ಹೆಚ್ಚಿಸಲಾಗಿದೆ. ಪಾಂಡಿಚೇರಿಯಲ್ಲಿ ಖಾಯಂ ಮಾಡಲಾಗಿದೆ. ಆದರೆ ಕರ್ನಾಟಕ ಸರಕಾರ ಮಾತ್ರ ಇವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದೆಂದು ಅವರು ಆರೋಪಿಸಿದರು.
ಅಧ್ಯಕ್ಷತೆಯನ್ನು ಸಂಘದ ಜಿಲ್ಲಾಧ್ಯಕ್ಷೆ ಗೀತಾ ಶೆಟ್ಟಿ ವಹಿಸಿದ್ದರು.
ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಮುಖಂಡ ಕವಿರಾಜ್, ಸಂಘದ ಉಪಾಧ್ಯಕ್ಷರುಗಳಾದ ಸಬಿತಾ ಶೆಟ್ಟಿ, ಸುಗುಣ ಶೆಟ್ಟಿ, ರತಿ ಶೆಟ್ಟಿ, ಕೋಶಾಧಿ ಕಾರಿ ಆಶಾಲತಾ ಉಪಸ್ಥಿತರಿದ್ದರು.
ಕಾರ್ಯದರ್ಶಿ ಸುಶೀಲಾ ನಾಡ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.







