ಬುಡಕ್ಕೆ ಬಂದಾಗ ಸತ್ಯ ಹೇಳಿದರೆ ಟ್ರಂಪ್ ?
ಸದ್ದಾಂ ಬಳಿ ಸಮೂಹ ವಿನಾಶದ ಅಸ್ತ್ರ ಇದೆ ಎಂದಿದ್ದು ಇವರೇ : ಸಿಐಎಗೆ ಟ್ರಂಪ್ ತಿರುಗೇಟು

ವಾಶಿಂಗ್ಟನ್, ಡಿ. 11: ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಪ್ರಚಾರ ಅವಧಿಯಲ್ಲಿ ನಡೆಯಿತೆನ್ನಲಾದ ಸೈಬರ್‌ದಾಳಿಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಅಧ್ಯಕ್ಷ ಬರಾಕ್ ಒಬಾಮ ಗುಪ್ತಚರ ಅಧಿಕಾರಿಗಳಿಗೆ ಆದೇಶ ನೀಡಿರುವುದು, ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಳಯದಲ್ಲಿ ನಡುಕ ಹುಟ್ಟಿಸಿದೆ. ಇದು ‘‘ಹಿಂದಿನದನ್ನು ಬಿಟ್ಟು ಮುಂದುವರಿಯುವ ಸಮಯ’’ ಎಂಬುದಾಗಿ ಟ್ರಂಪ್ ಪಾಳಯ ಹೇಳಿದೆ.
ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಗೆಲುವಿಗೆ ರಶ್ಯ ಯೋಜನೆ ರೂಪಿಸಿತ್ತು ಎನ್ನುವುದನ್ನು ಬಹಿರಂಗಪಡಿಸಿರುವುದಕ್ಕಾಗಿ ಸೆಂಟ್ರಲ್ ಇಂಟಲಿಜನ್ಸ್ ಏಜನ್ಸಿ (ಸಿಐಎ)ಯನ್ನು ಟೀಕಿಸಿ ಟ್ರಂಪ್ ಪಾಳಯ ಪ್ರಕಟನೆಯೊಂದನ್ನು ಹೊರಡಿಸಿದೆ.
‘‘ಸದ್ದಾಂ ಹುಸೈನ್ ಸಾಮೂಹಿಕ ವಿನಾಶಕ ಅಸ್ತ್ರಗಳನ್ನು ಹೊಂದಿದ್ದರು ಎಂದು ಇದೇ ಜನರು ಹೇಳಿದ್ದರು’’ ಎಂದು ಹೇಳಿಕೆ ತಿಳಿಸಿದೆ.
‘‘ಚುನಾವಣೆ ಮುಗಿದು ತುಂಬಾ ಸಮಯವಾಗಿದೆ ಹಾಗೂ ಇತಿಹಾಸದಲ್ಲೇ ದೊಡ್ಡ ಇಲೆಕ್ಟೋರಲ್ ಕಾಲೇಜ್ ವಿಜಯ ಟ್ರಂಪ್ ಪಾಲಾಗಿದೆ. ಈಗ ಹಿಂದಿನದನ್ನು ಬಿಟ್ಟು ಮುಂದಕ್ಕೆ ಸಾಗಿ ‘ಅಮೆರಿಕವನ್ನು ಮತ್ತೊಮ್ಮೆ ಶ್ರೇಷ್ಠ ದೇಶವನ್ನಾಗಿ ಮಡುವ’ ಸಮಯ’’ ಎಂದು ಟ್ರಂಪ್ ಬಳಗ ಹೇಳಿದೆ.
ಸೈಬರ್ ದಾಳಿ ನಡೆಸುವ ಮೂಲಕ ರಶ್ಯ ಅಮೆರಿಕದ ಚುನಾವಣೆಯನ್ನು ಅಸ್ತವ್ಯಸ್ತಗೊಳಿಸಲು ಬಯಸಿತ್ತು ಎಂಬ ಗುಪ್ತಚರ ಸಂಸ್ಥೆಯ ನಿರ್ಧಾರವನ್ನು ಟ್ರಂಪ್ ಪದೇ ಪದೇ ತಳ್ಳಿಹಾಕಿದ್ದರು ಎನ್ನುವುದನ್ನು ಸ್ಮರಿಸಬಹುದಾಗಿದೆ. ಅದೇ ರೀತಿಯಲ್ಲಿ, ಈಗ ಒಬಾಮ ತೆಗೆದುಕೊಂಡಿರುವ ನಿರ್ಧಾರಕ್ಕೂ ಟ್ರಂಪ್ ತಂಡ ಆಕ್ಷೇಪ ವ್ಯಕ್ತಪಡಿಸಿದೆ.
ಪ್ರಚಾರ ಅವಧಿಯಲ್ಲಿ ದುರುದ್ದೇಶಪೂರ್ವಕ ಸೈಬರ್ ಚಟುವಟಿಕೆಗಳನ್ನು ನಡೆಸುವ ಸಂಭಾವ್ಯ ಸಂಚಿನ ಬಗ್ಗೆ ತನಿಖೆಗೆ ಒಬಾಮ ಆದೇಶ ನೀಡಿರುವುದು ಸಂಚಿನ ಬುಡಕ್ಕೆ ಹೋಗುವ ಪ್ರಯತ್ನವಾಗಿದೆ ಎಂದು ಶ್ವೇತಭವನದ ವಕ್ತಾರ ಎರಿಕ್ ಶುಲ್ಝ್ ಹೇಳಿದ್ದಾರೆ.
ತಂತ್ರಗಾರಿಕೆ, ಉದ್ದೇಶಗಳು, ಪ್ರಮುಖವಾಗಿ ಶಾಮೀಲಾದವರು, ಇತ್ತೀಚಿನ ಇಮೇಲ್ ಕನ್ನಗಳಿಗೆ ಅಮೆರಿಕ ಸರಕಾರದ ಪ್ರತಿಕ್ರಿಯೆ ಹಾಗೂ ಹಿಂದಿನ ಚುನಾವಣೆಗಳಲ್ಲಿ ವರದಿಯಾದ ಘಟನೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿರುವುದಾಗಿ ಶುಲ್ಝ್ ಹೇಳಿದರು.







