ಹೆಲ್ಪ್ ಇಂಡಿಯಾದಿಂದ ಉಚಿತ ಶ್ರವಣ ಸಾಧನ ವಿತರಣಾ ಕಾರ್ಯಕ್ರಮ

ಮಂಗಳೂರು, ಡಿ.11: ಬಡಮಕ್ಕಳನ್ನು ಶ್ರವಣ ಚಿಕಿತ್ಸೆಗೆ ಕರೆ ತಂದರೆ ದಿನಭತ್ತೆಯನ್ನು ಸರಕಾರದ ವತಿಯಿಂದ ನೀಡಲಾಗುತ್ತದೆ. ಚಿಕ್ಕ ವಯಸ್ಸಿನಲ್ಲಿದ್ದಾಗಲೇ ಶ್ರವಣ ದೋಷ ಕಂಡು ಬಂದಲ್ಲಿ ವೈದ್ಯರನ್ನು ಸಂಪರ್ಕಿಸಬೇಕು. ಶ್ರವಣ ಚಿಕಿತ್ಸೆ ನೀಡುವ ವೈದ್ಯರ ಕೊರತೆ ಇದ್ದು, ಅದನ್ನು ನೀಗಿಸಲು ಸರಕಾರ ಸೂಕ್ತ ಕ್ರಮ ಜರಗಿಸಲಾಗುತ್ತದೆ ಎಂದು ಸಚಿವ ಯು.ಟಿ. ಖಾದರ್ ತಿಳಿಸಿದರು.
ತೊಕ್ಕೊಟ್ಟಿನ ಹೆಲ್ಪ್ ಇಂಡಿಯಾ ಫೌಂಡೇಶನ್ ಹಾಗೂ ಬೆಂಗಳೂರಿನ ಯು.ಟಿ. ನಸೀಮಾ ಇನ್‌ಸ್ಟಿಟ್ಯೂಟ್ ಆಫ್ ಸ್ಪೀಚ್ ಆ್ಯಂಡ್ ಹಿಯರಿಂಗ್ ಸಂಸ್ಥೆಯ ಸಹಯೋಗದಲ್ಲಿ ರವಿವಾರ ನಗರದ ಪುರಭವನದಲ್ಲಿ ನಡೆದ ಬಡತನ ರೇಖೆಯ ಕೆಳಗಿನ ಮಕ್ಕಳಿಗೆ 50 ಉಚಿತ ಶ್ರವಣ ಸಾಧನ ವಿತರಣೆ ಹಾಗೂ ಉಚಿತ ಶಸ್ತ್ರಚಿಕಿತ್ಸೆ ಪೂರ್ವಭಾವಿ ತಪಾಸಣಾ ಶಿಬಿರದಲ್ಲಿ ಶ್ರವಣ ಸಾಧನ ವಿತರಿಸಿ ಅವರು ಮಾತನಾಡಿದರು.
ಶ್ರವಣ ಚಿಕಿತ್ಸೆಗೆ ಲಕ್ಷಾಂತರ ರೂ. ಖರ್ಚಾಗುತ್ತಿದೆ. ಅರ್ಹ ರೋಗಿಗಳಿಗೆ ನೆರವು ನೀಡಲು ಸರಕಾರ ಬದ್ಧವಾಗಿದೆ. ಶ್ರವಣ ದೋಷದ ಕುರಿತು ತಪಾಸಣೆ ಮಾಡಿದ ಬಳಿಕ ಸತತವಾಗಿ ಸ್ಪೀಚ್ ಥೆರಪಿ ಮಾಡಿಸಬೇಕು. ಸಮಯದ ಅಭಾವವಿದೆ ಎಂದು ತಡ ಮಾಡದೇ ವೈದ್ಯರ ಬಳಿ ಕರೆದೊಯ್ಯಬೇಕು. ಯುವಕರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಅರ್ಹರಿಗೆ ಅದರ ಪ್ರಯೋಜನ ಲಭಿಸುತ್ತದೆ ಎಂಬುದನ್ನು ಮರೆಯಬಾರದು ಎಂದು ಖಾದರ್ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಶಾಲಾ ಮಕ್ಕಳಿಗೆ ಈಗಾಗಲೇ ಸರ್ವ ಶಿಕ್ಷಾ ಅಭಿಯಾನದ ಯೋಜನೆಯಲ್ಲಿ ಚಿಕಿತ್ಸಾ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನೂ ಹೆಚ್ಚಿನ ಮಟ್ಟದಲ್ಲಿ ಅಂತಹ ವಿದ್ಯಾರ್ಥಿಗಳನ್ನು ಗುರುತಿಸಿ ಚಿಕಿತ್ಸೆ ನೀಡಬೇಕಾಗಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿ, ಮಕ್ಕಳಲ್ಲಿ ಇಂತಹ ಸಮಸ್ಯೆಗಳಿದ್ದರೂ ನಗರ ಪ್ರದೇಶಕ್ಕೆ ಬಂದು ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ. ಅಂತಹವರಿಗೆ ಸಹಕಾರ ನೀಡಬೇಕಾಗಿದೆ ಎಂದು ಹೇಳಿದರು.
ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹೆಲ್ಪ್ ಇಂಡಿಯಾ ಫೌಂಡೇಶನ್ ಸ್ಥಾಪಕಾಧ್ಯಕ್ಷ ನಾಸಿರ್ ಮೊಯ್ದಿನ್ ಅಧ್ಯಕ್ಷತೆ ವಹಿಸಿದ್ದರು.
ಶಾಸಕರಾದ ಜೆ.ಆರ್. ಲೋಬೊ, ಬಿ.ಎ.ಮೊಯ್ದಿನ್ ಬಾವ, ತುಳುನಾಡು ವೇದಿಕೆಯ ಯೋಗಿಶ್ ಶೆಟ್ಟಿ ಜಪ್ಪು ಮಾತನಾಡಿದರು.
ಯು.ಟಿ. ನಸೀಮಾ ಇನ್‌ಸ್ಟಿಟ್ಯೂಟ್ ಆಫ್ ಸ್ಪೀಚ್ ಆ್ಯಂಡ್ ಹಿಯರಿಂಗ್ ಸಂಸ್ಥೆಯ ಮುಖ್ಯಸ್ಥ ಯು.ಟಿ. ಝಲ್ಫಿಕರ್ ಅಲಿ, ಮಾನಸಿಕ ತಜ್ಞ ಪ್ರೊ. ರವೀಶ್ ತಂಗ, ಹೆಲ್ಪ್ ಇಂಡಿಯಾ ಫೌಂಡೇಶನ್ ಸ್ಥಾಪಕಾಧ್ಯಕ್ಷ ನಾಸಿರ್ ಮೊಯ್ದಿನ್ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಮುಸ್ಲಿಮ್ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಕೆ.ಎಸ್. ಮುಹಮ್ಮದ್ ಮಸೂದ್ ಮುಡಾ ಮಾಜಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಉಪ ಪೊಲೀಸ್ ಆಯುಕ್ತ ಶಾಂತಾರಾಜ್, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ನಿರ್ವಾಹಕ ರೆ.ಫಾ. ರಿಚಾರ್ಡ್ ಅಲೋಶಿಯಸ್ ಕೊಯಿಲೊ, ಉದ್ಯಮಿ ಝಕರಿಯಾ ಜೋಕಟ್ಟೆ, ಕಾರ್ಯದರ್ಶಿ ಅಬ್ದುರ್ರಾಝಿಕ್ ಉಳ್ಳಾಲ, ಉಪಾಧ್ಯಕ್ಷ ಉಮರ್ ಫಾರೂಕ್ ಪಟ್ಲ, ಕೋಶಾಧಿಕಾರಿ ಬಾವಾ ಅಬ್ದುಲ್ ಖಾದರ್, ಸದಸ್ಯ ಸರ್ಫ್ರಾಝ್ ಚಮ್ನಾಡ್, ಯು.ಎನ್. ಸೀದಿಯಬ್ಬ, ದಿನೇಶ್ ರಾವ್, ಡಾ. ಅಖಿಲೇಶ್, ದತ್ತಾತ್ರೇಯ, ವಿನೀತ್ ರೈ, ಝಾಕಿರ್ ಹುಸೈನ್ ಮತ್ತಿತರರು ಉಪಸ್ಥಿತರಿದ್ದರು.







