ಪಾಸ್‌ಪೋರ್ಟ್‌ಗಳಲ್ಲಿ ಜನ್ಮದಿನ ಬದಲಾವಣೆ ಪ್ರಕ್ರಿಯೆ ಸರಳ

ಹೊಸದಿಲ್ಲಿ, ಡಿ.11: ಹಾಲಿ ಪಾಸ್‌ಪೋರ್ಟ್‌ಗಳಲ್ಲಿ ಜನನ ದಿನಾಂಕವನ್ನು ಬದಲಾವಣೆ ಮಾಡಲು ಇನ್ನು ಮುಂದೆ ಹೆಚ್ಚು ಕಷ್ಟಪಡಬೇಕಾಗದು. ಪ್ರಯಾಣ ದಾಖಲೆ ನೀಡಿಕೆಗೆ ಸಂಬಂಧಿಸಿದ ಸೇವೆಗಳನ್ನು ಸರಕಾರ ಇನ್ನಷ್ಟು ಸರಳಗೊಳಿಸಲಿದೆ.
ಈಗಿರುವ ನಿಯಮವನ್ನು ಬದಲಿಸಿರುವ ಸರಕಾರ, ವಿವಾಹ ಹಾಗೂ ಜನನಕ್ಕೆ ಅಧಿಕೃತ ಪುರಾವೆಗಳಾಗಿ ಕ್ರಮವಾಗಿ ಡಿಜಿಟಲ್ ಹಸ್ತಾಕ್ಷರವಿರುವ ವಿವಾಹ ಹಾಗೂ ಜನನ ಪ್ರಮಾಣ ಪತ್ರಗಳಿಗೆ ಅವಕಾಶ ನೀಡಿದೆ.
ಪರಿಷ್ಕೃತ ಮಾರ್ಗ ಸೂತ್ರದಂತೆ, ಪಾಸ್‌ಪೋರ್ಟ್ ನೀಡಿ ಎಷ್ಟೇ ಕಾಲ ಕಳೆದು ಹೋಗಿದ್ದರೂ, ಪ್ರತಿಯೊಬ್ಬ ಅರ್ಜಿದಾರನ ಜನನ ದಿನಾಂಕ ಬದಲಾವಣೆಯ ಕುರಿತಾದ ಮನವಿಯನ್ನು ಪರಿಗಣಿಸುವ ಅಧಿಕಾರವನ್ನು ಪಾಸ್‌ಪೋರ್ಟ್ ನೀಡಿಕೆ ಅಧಿಕಾರಿಗಳಿಗೆ ಕೊಡಲಾಗಿದೆ.
ಹಿಂದಿನ ಮಾರ್ಗಸೂಚಿಯಂತೆ, ಜನನ ದಿನಾಂಕ ಬದಲಾವಣೆಗೆ ಪಾಸ್‌ಪೋರ್ಟ್ ನೀಡಿದ 5 ವರ್ಷಗಳೊಳಗೆ ಮನವಿ ಸಲ್ಲಿಸಬೇಕಿತ್ತು. ಅದಕ್ಕೆ ಭಾರೀ ದಾಖಲೆ ಪತ್ರಗಳ ಕೆಲಸವಿದ್ದುದರಿಂದ ಪ್ರಕ್ರಿಯೆಯು ಸುದೀರ್ಘ ಹಾಗೂ ತ್ರಾಸದ್ದಾಗಿತ್ತು.
ಅರ್ಜಿದಾರ ಸಲ್ಲಿಸದ ದಾಖಲೆಗಳ ಆಧಾರದ ಮನವಿಯು ಪಾಸ್‌ಪೋರ್ಟ್ ನೀಡಿಕೆ ಅಧಿಕಾರಿಗಳಿಗೆ ತೃಪ್ತಿಕರವಾದರೆ, ಸಂಬಂಧಿತ ಅಧಿಕಾರಿಗಳು ಪರಿಷ್ಕೃತ ಜನನ ದಿನಾಂಕದೊಂದಿಗೆ ಪಾಸ್‌ಪೋರ್ಟ್ ನೀಡಲಿದ್ದಾರೆ. ಪ್ರಕರಣಗಳ ವಾಸ್ತವದ ಆಧಾರದಲ್ಲಿ ಅಧಿಕಾರಿಗಳು ಹೊಸ ಪಾಸ್‌ಪೋರ್ಟನ್ನೂ ನೀಡಬಹುದೆಂದು ಮುಖ್ಯ ಪಾಸ್‌ಪೋರ್ಟ್ ಅಧಿಕಾರಿ ಅರುಣ್.ಕೆ.ಚಟರ್ಜಿ ತಿಳಿಸಿದ್ದಾರೆ.







