ಬಾಷ್ ಕಂಪೆನಿ ಕಾರ್ಮಿಕರು ಅಸ್ವಸ್ಥ, ಇಬ್ಬರ ಸ್ಥಿತಿ ಚಿಂತಾಜನಕ

ಬೆಂಗಳೂರು, ಡಿ. 11: ನ್ಯಾಯಕ್ಕಾಗಿ ಆಗ್ರಹಿಸಿ ಆಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದ ಬಾಷ್ ಕಂಪೆನಿಯ ಕಾರ್ಮಿಕರಲ್ಲಿ ಎಂಟು ಮಂದಿ ಅಸ್ವಸ್ಥಗೊಂಡಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಕಾರ್ಮಿಕರಾದ ನಾಗೇಶ್ ಮತ್ತು ಸತೀಶ್ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಸರಕಾರಿ ವೈದ್ಯಕೀಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಪ್ರಶಾಂತ್, ನಾಗರಾಜ್, ಪ್ರವೀಣ್,ನಾಗೇಶ್ ಬಾಬು ರವಿಕುಮಾರ್, ಶಂಕರಯ್ಯ ಹಿರೇಮಠ್, ಕೃಷ್ಣ ಎಂಬುವವರು ತೀವ್ರವಾಗಿ ಅಸ್ವಸ್ಥರಾಗಿದ್ದಾರೆ. ಪ್ರತಿಭಟನಾ ಸ್ಥಳದಲ್ಲೇ ಸರಕಾರಿ ವೈದ್ಯಕೀಯ ಅಧಿಕಾರಿಗಳು ಮೊಕ್ಕಾಂ ಹೂಡಿ ಚಿಕಿತ್ಸೆ ನೀಡುತ್ತಿದ್ದಾರೆ.
ಉಪವಾಸ ಸತ್ಯಾಗ್ರಹ ನಿರತ ಕಾರ್ಮಿಕರಲ್ಲಿ ರಕ್ತದೊತ್ತಡ ಕಡಿಮೆಯಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದಾರೆ. ಆದರೆ ಕಾರ್ಮಿಕರು ಉಪವಾಸ ಕೈಬಿಡಲು ನಿರಾಕರಿಸಿದ್ದಾರೆ.ಬೇಡಿಕೆ ಈಡೇರುವವರೆಗೂ ಉಪವಾಸ ಕೈಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಬಾಷ್ ಕಂಪೆನಿ ಆಡಳಿತ ಮಂಡಳಿಯ ಹಠಮಾರಿ ಧೋರಣೆಯಿಂದ ನಾವು ಬೀದಿಗೆ ಬಿದ್ದಿದ್ದೇವೆ. ನ್ಯಾಯದೊರಕಿಸಿ ಕೊಡಬೇಕಾದ ಸರಕಾರ ಜಾಣ ವೌನವಹಿಸಿದೆ ಎಂದು ಅಸ್ವಸ್ಥ ಕಾರ್ಮಿಕ ಪ್ರಶಾಂತ್ ಆರೋಪಿಸಿದರು.
ಬಾಷ್ ಕಂಪೆನಿ ಯಾವುದೇ ಮುನ್ಸೂಚನೆ ಇಲ್ಲದೆ ಏಕಾಏಕಿ 263ಕಾರ್ಮಿಕರನ್ನು ವಜಾ ಮಾಡಿತ್ತು. ಈ ಅನ್ಯಾಯವನ್ನು ಖಂಡಿಸಿ 486ದಿನಗಳಿಂದ ಆಡುಗೋಡಿಯ ಬಾಷ್ ಕಂಪನಿಎದುರು ಪ್ರತಿಭಟನೆ ನಡೆಸುತ್ತಿದ್ದರು.ಇವರ ಹೋರಾಟಗಳಿಗೆ ಸೊಪ್ಪು ಹಾಕದ ಬಾಷ್ ಕಂಪೆನಿಯ ಆಡಳಿತಾಧಿಕಾರಿಗಳು ಹಠಮಾರಿ ಧೋರಣೆಗೆ ಬೇಸತ್ತು ಕಾರ್ಮಿಕರು ನಾಲ್ಕು ದಿನಗಳಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ.
ಕಂಪೆನಿಯ ಮುಂಭಾಗವೇ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.ಆದರೆ ಕಾರ್ಮಿಕರು ಅಸ್ವಸ್ಥಗೊಂಡಿರುವ ಸುದ್ದಿ ತಿಳಿದರೂ ಕಾರ್ಮಿಕರ ಆರೋಗ್ಯ ವಿಚಾರಿಸಲೂ ಬಾಷ್ ಕಂಪೆನಿಯ ಆಡಳಿತ ವರ್ಗ ಬರದೇ ಮೊಂಡುತನ ಪ್ರದರ್ಶಿಸುತ್ತಿದ್ದಾರೆ ಎಂದು ಕಾರ್ಮಿಕರ ಸಂಬಂಧಿಗಳು ಆರೋಪಿಸಿದ್ದಾರೆ.







