ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೆ ಬದ್ಧ: ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ
ಹುಬ್ಬಳ್ಳಿಯಲ್ಲಿ ಮಾದಿಗರ ಬೃಹತ್ ಸಮಾವೇಶ

ಹುಬ್ಬಳ್ಳಿ/ಬೆಂಗಳೂರು, ಡಿ. 11: ಜಾತಿವಾರು ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸಲು ಬದ್ಧ. ಪರಿಶಿಷ್ಟ ಜಾತಿ ಒಳ ಮೀಸಲಾತಿ ಕಲ್ಪಿಸುವ ಸಂಬಂಧದ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ರವಿವಾರ ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಅಖಿಲ ಕರ್ನಾಟಕ ಮಾದಿಗರ ಮಹಾಸಭಾ ವತಿಯಿಂದ ಏರ್ಪಡಿಸಿದ್ದ ‘ಮಾದಿಗರ ಮಹಾ ಸಮಾವೇಶ’ ಉದ್ಘಾಟಿಸಿ ಮಾತನಾಡಿದ ಅವರು, ಸದಾಶಿವ ಆಯೋಗದ ವರದಿ ಬಗ್ಗೆ ಪರ-ವಿರೋಧ ಸಹಜ. ಹೀಗಾಗಿ ಎಲ್ಲರ ಅಭಿಪ್ರಾಯಪಡೆದ ಬಳಿಕ ಸಂಪುಟದಿಂದ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷಾ ವರದಿ ಹಾಗೂ ಸದಾಶಿವ ಆಯೋಗದ ವರದಿಯನ್ನು ಜನವರಿಯಲ್ಲಿ ಜಾರಿಗೆ ತರಲಾಗುವುದು ಎಂದ ಅವರು, ನಾನು ನಿಮ್ಮ ಪರವಾಗಿದ್ದೇನೆ. ಈ ಬಗ್ಗೆ ಯಾರೊಬ್ಬರಿಗೂ ಆತಂಕಬೇಡ ಎಂದು ಅಭಯ ನೀಡಿದರು.
ಮೀಸಲಾತಿ ಪ್ರಮಾಣ ಹೆಚ್ಚಳ: ಮೀಸಲಾತಿಯ ಪ್ರಮಾಣ ಶೇ.50ಕ್ಕೆ ಮೀರಬಾರದೆಂದು ಸುಪ್ರೀಂ ಕೋರ್ಟ್ ಹೇಳಿದೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸಬಾರದೆಂದು ಎಲ್ಲಿಯೂ ಹೇಳಿಲ್ಲ. ತಮಿಳುನಾಡು ಮಾದರಿಯಲ್ಲೆ ರಾಜ್ಯದಲ್ಲಿ ಮೀಸಲಾತಿ ಪ್ರಮಾಣ ಶೇ.70ಕ್ಕೆ ಹೆಚ್ಚಳಕ್ಕೆ ಮುಂದಿನ ಅಧಿವೇಶನದಲ್ಲಿ ಚರ್ಚಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಅವರು ಪ್ರಕಟಿಸಿದರು.
ಎಲ್ಲ ಜಾತಿ-ಜನಾಂಗಗಳಿಗೂ ಜನಸಂಖ್ಯೆಗೆ ಅನುಗುಣವಾಗಿ ದೇಶದ ಸಂಪತ್ತಿನ ಹಂಚಿಕೆಯಾಗಬೇಕೆಂದು ಸಂವಿಧಾನ ಸ್ಪಷ್ಟವಾಗಿ ಹೇಳಿದೆ. ಅದನ್ನೆ ಶರಣರು ಪ್ರತಿಪಾದಿಸಿದ್ದಾರೆ. ಶೋಷಿತ ಸಮುದಾಯಗಳಿಗೆ ವಿಶೇಷ ಸೌಲಭ್ಯಗಳನ್ನು ಕಲ್ಪಿಸದಿದ್ದರೆ ಮೇಲ್ಜಾತಿಯವರೊಂದಿಗೆ ಸ್ಪರ್ಧೆ ಕಷ್ಟಸಾಧ್ಯವೆಂಬುದನ್ನು ಮನಗಂಡು ಅಂಬೇಡ್ಕರ್ ಮೀಸಲಾತಿ ರೂಪಿಸಿದ್ದು ಎಂದು ಸಿದ್ದರಾಮಯ್ಯ ಸ್ಮರಿಸಿದರು.
ನಮ್ಮ ದೇಶದಲ್ಲಿ ಅಸ್ಪಶ್ಯತೆ ಇನ್ನೂ ಜೀವಂತಾಗಿದೆ ಎಂಬುದು ನೋವಿನ ಸಂಗತಿ. ನಾವೆಲ್ಲರೂ ಮನುಷ್ಯರು. ಇದೇ ಜಾತಿಯಲ್ಲಿ ಹುಟ್ಟಬೇಕೆಂದು ಯಾರೂ ಅರ್ಜಿ ಹಾಕುವುದಿಲ್ಲ. ಜಾತಿ ವ್ಯವಸ್ಥೆ ಇರುವುದರಿಂದ ಈ ಜಾತಿಯಲ್ಲಿ ಹುಟ್ಟಿದ್ದೇವೆ. ಹಾಗೆಂದು ಜಾತಿ ಹಣೆಪಟ್ಟಿ ಕಟ್ಟಿಕೊಳ್ಳಬೇಕಿಲ್ಲ. ಜಾತಿ ವಿನಾಶ ಆಗಿ ಸಮಾನತೆ ಮೂಡಬೇಕೆಂದು ಅವರು ಅಭಿಪ್ರಾಯಪಟ್ಟರು.
ಜಾತಿ ವ್ಯವಸ್ಥೆ ಅತ್ಯಂತ ಆಳವಾಗಿ ಬೇರೂರಿದ್ದು, ಅದನ್ನು ಸಡಿಲಗೊಳಿಸಲು ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಯಿಂದ ಮಾತ್ರ ಸಾಧ್ಯ. ರಾಜಕೀಯ ಸ್ವಾತಂತ್ರದ ಜೊತೆಗೆ ಸಾಮಾಜಿಕ, ಆರ್ಥಿಕ ಸ್ವಾತಂತ್ರವೂ ಸಿಕ್ಕರೆ ಜಡ್ಡುಗಟ್ಟಿದ ಜಾತಿ ವ್ಯವಸ್ಥೆಗೆ ಚಲನಶೀಲತೆ ಬರಲಿದೆ ಎಂದು ಸಿದ್ದರಾಮಯ್ಯ ವಿಶ್ಲೇಷಿಸಿದರು.
ಎಲ್ಲ ವರ್ಗದವರಿಗೆ ಸಮಾಜ ಶಿಕ್ಷಣ, ಸಂಪತ್ತಿನ ಸಮಾನ ಹಂಚಿಕೆ ಹಾಗೂ ಅಧಿಕಾರದಲ್ಲಿ ಪಾಲು ಸಿಕ್ಕರೆ ಬದಲಾವಣೆಗೆ ವೇಗ ಬರಲಿದೆ. ಜಾತಿ-ಜಾತಿಗಳ ಮಧ್ಯೆ ಸಮಾನತೆ ಬರುವುದಲ್ಲದೆ, ಅಭಿವೃದ್ಧಿಯೂ ಸಾಧ್ಯ. ಆ ನಿಟ್ಟಿನಲ್ಲಿ ರಾಜ್ಯ ಸರಕಾರ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಹಂಚಿಕೆ ಮಾಡುವ ಪ್ರಯತ್ನ ನಡೆಸಿದೆ ಎಂದರು.
ಐತಿಹಾಸಿಕ ಸಮಾವೇಶ: ಮಾದಿಗರ ಸಮಾವೇಶ ಇದೊಂದು ಐತಿಹಾಸಿಕ. ಪ್ರಜಾಪ್ರಭುತ್ವ ವ್ಯವಸ್ಥೆ ಯಶಸ್ವಿಯಾಗಲು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಆಶಯಗಳು ಈಡೇರಬೇಕು. ಮಾತ್ರವಲ್ಲ ತುಳಿತಕ್ಕೊಳಗಾದ ಕೆಳವರ್ಗದ ಜನತೆ ಮುಖ್ಯವಾಹಿನಿಗೆ ಬರಬೇಕೆಂದು ಅಪೇಕ್ಷೆಪಟ್ಟರು.
ಸಮಾವೇಶದಲ್ಲಿ ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ, ತೋಂಟದಾರ್ಯ ಮಠದ ಸಿದ್ದಲಿಂಗೇಶ್ವರ ಸ್ವಾಮಿ, ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿ, ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವ ಗೋವಿಂದ ಕಾರಜೋಳ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.
‘ಮಾದಿಗರ ಸಮಾವೇಶಕ್ಕೆ ಆಗಮಿಸುವ ವೇಳೆ ರಸ್ತೆ ಅಪಘಾತದ ಪರಿಣಾಮ ಸಾವನ್ನಪ್ಪಿದವರ ಕುಟುಂಬಕ್ಕೆ ರಾಜ್ಯ ಸರಕಾರದ ವತಿಯಿಂದ ತಲಾ 1ಲಕ್ಷ ರೂ. ಪರಿಹಾರ ನೀಡಲಾಗುವುದು’
-ಸಿದ್ದರಾಮಯ್ಯ ಮುಖ್ಯಮಂತ್ರಿ







