‘ನೋಟು ಅಮಾನ್ಯದಿಂದ ಫ್ಯಾಶನ್ ಉದ್ಯಮದಲ್ಲಿ ತಲ್ಲಣ’

ಹೈದರಾಬಾದ್, ಡಿ.11: ಅಧಿಕ ಮೌಲ್ಯದ ನೋಟು ಅಮಾನ್ಯಗೊಳಿಸುವ ನಿರ್ಧಾರವು ದೇಶದ ಫ್ಯಾಶನ್ ಉದ್ಯಮದಲ್ಲಿ ತಲ್ಲಣಕ್ಕೆ ಕಾರಣವಾಗಿದ್ದು, ಹೆಚ್ಚುತ್ತಿರುವ ಪೈಪೋಟಿಯನ್ನು ಎದುರಿಸಲು ಉದ್ಯಮಿಗಳು ಹೊಸ ಕಾರ್ಯತಂತ್ರವನ್ನು ರೂಪಿಸುವ ಅನಿವಾರ್ಯತೆ ಸೃಷ್ಟಿಸಿದೆ ಎಂದು ಫ್ಯಾಶನ್ ಡಿಸೈನರ್ ರಾಘವೇಂದ್ರ ರಾಥೋರ್ ಹೇಳಿದ್ದಾರೆ.
ನೋಟು ಅಮಾನ್ಯ ನಿರ್ಧಾರವು ರಿಯಲ್ ಎಸ್ಟೇಟ್ ಕ್ಷೇತ್ರದ ಮೇಲೆ ಪರಿಣಾಮ ಬೀರಿದ್ದು ಬದಲಾವಣೆಗೆ ಕಾರಣವಾಗಿದೆ. ಅಲ್ಲದೆ ಹಣದ ವ್ಯವಹಾರವೇ ಪ್ರಧಾನವಾಗಿರುವ ಫ್ಯಾಶನ್ ಉದ್ಯಮದಲ್ಲೂ ತಲ್ಲಣಕ್ಕೆ ಕಾರಣವಾಗಿದೆ.
ಹೊಸ ರೀತಿಯ ವ್ಯವಸ್ಥೆ ರೂಪುಗೊಳ್ಳಬಹುದು ಮತ್ತು ನಾವು ನಮ್ಮ ವ್ಯವಹಾರ ಮತ್ತು ಉತ್ಪನ್ನಗಳನ್ನು ಈ ವ್ಯವಸ್ಥೆಗೆ ಸರಿಹೊಂದಿಸಬೇಕಿದೆ. ಜಾಗತಿಕ ಮಟ್ಟದ ಸ್ಪರ್ಧೆ ಎದುರಿಸಲು ಸಿದ್ಧರಾಗಬೇಕು. ಯಾಕೆಂದರೆ ನ.8ರ ಮೊದಲು ಇದ್ದ ಭಾರತ ಬದಲಾವಣೆಯ ಹಾದಿಯಲ್ಲಿದೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಸಂಸ್ಕೃತಿ ದೇಶದ ಪ್ರಮುಖ ಆಕರ್ಷಣೆಯಾಗಿ ಉಳಿಯದು. ನಾವು ಇನ್ನು ಅಂತಾರಾಷ್ಟ್ರೀಯ ಬ್ರಾಂಡ್‌ಗಳ ಜೊತೆ ಸ್ಪರ್ಧಿಸಬೇಕಿದೆ. ಎಲ್ಲ ವ್ಯವಹಾರವೂ ಇನ್ನು ಮುಂದೆ ಕ್ರೆಡಿಟ್ ಕಾರ್ಡ್‌ನಲ್ಲಿ ಮತ್ತು ಬಿಳಿ ಹಣದಲ್ಲಿ ನಡೆಯುತ್ತದೆ . ಭಾರೀ ಬದಲಾವಣೆ ಆಗಲಿದೆ ಎಂದರು.
ಮುಂದಿನ ಎರಡ್ಮೂರು ವರ್ಷಗಳಲ್ಲಿ ಭಾರತದ ಸ್ವರೂಪವೇ ಬದಲಾಗಲಿದೆ. ವ್ಯವಸ್ಥೆಗೆ ತಕ್ಕಂತೆ ನಮ್ಮನ್ನು ಸರಿಹೊಂದಿಸಿಕೊಳ್ಳಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.







