ಸ್ಥಳೀಯರಲ್ಲಿ ಮೋದಿ ವಿರುದ್ಧ ಅಸಮಾಧಾನ, ಬಾರದ ಜನ : ಪ್ರಧಾನಿ ಸಮಾವೇಶ ರದ್ದು
.jpg)
ಬಹರೈಚ್, ಡಿ.11 : ಉತ್ತರ ಪ್ರದೇಶದ ಬಹರೈಚ್ ನಲ್ಲಿ ರವಿವಾರ ಆಯೋಜಿಸಲಾಗಿದ್ದ ಪ್ರಧಾನಿ ನರೇಂದ್ರ ಮೋದಿಯವರ ಬೃಹತ್ ಸಮಾವೇಶವನ್ನು ಕೊನೆ ಕ್ಷಣದಲ್ಲಿ ರದ್ದುಪಡಿಸಲಾಗಿದೆ.
ಸಮಾವೇಶಕ್ಕೆ ನಿರೀಕ್ಷಿತ ಸಂಖ್ಯೆಯಲ್ಲಿ ಜನರು ಸೇರದೆ ಇದ್ದದ್ದು ಹಾಗೂ ಸ್ಥಳೀಯವಾಗಿ ಪ್ರಧಾನಿ ಮೋದಿ ಮತ್ತು ಕೇಂದ್ರ ಸರಕಾರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಕೊನೆ ಕ್ಷಣದಲ್ಲಿ ಪ್ರಧಾನಿ ಮೋದಿ ಅವರಿದ್ದ ಹೆಲಿಕಾಪ್ಟರನ್ನು ಬಹರೈಚ್ ನಲ್ಲಿ ಇಳಿಸದೆ ಇರಲು ತೀರ್ಮಾನಿಸಲಾಯಿತು ಎಂದು ಹಿಂದಿ ನ್ಯೂಸ್ ವೆಬ್ ಸೈಟ್ ‘ ದೈನಿಕ್ ಆಜ್ ಡಾಟ್ ಕಾಂ’ ವರದಿ ಮಾಡಿದೆ.
ಈ ಸಮಾವೇಶಕ್ಕಾಗಿ ಪಕ್ಷದಿಂದ ಭರ್ಜರಿ ತಯಾರಿ ನಡೆದಿತ್ತು. ಆದರೆ ಕೊನೆ ಕ್ಷಣದಲ್ಲಿ ಪ್ರತಿಕೂಲ ಹವಾಮಾನದ ನೆಪವೊಡ್ಡಿ ಪ್ರಧಾನಿ ಮೋದಿ ಇದ್ದ ಹೆಲಿಕಾಪ್ಟರ್ ನ್ನು ಬಹರೈಚ್ ನಲ್ಲಿ ಇಳಿಸದೆ ಅವರು ವಾಪಸ್ ಹೋಗಬೇಕಾಯಿತು.
ಸ್ಥಳೀಯರ ಪ್ರಕಾರ, ಪ್ರದೇಶದಲ್ಲಿ ಅಂತಹ ವಿಶೇಷ ಹವಾಮಾನ ವೈಪರೀತ್ಯ ಇರಲಿಲ್ಲ ಎಂದು ವೆಬ್ ಸೈಟ್ ವರದಿ ಹೇಳಿದೆ. ನೋಟು ರದ್ದತಿ ಬಳಿಕ ಬಹರೈಚ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಬಗ್ಗೆ ಜನರಲ್ಲಿ ವ್ಯಾಪಕ ಅಸಮಾಧಾನ, ಆಕ್ರೋಶ ಕಂಡುಬಂದಿತ್ತು. ಮೋದಿ ವಿರುದ್ಧ ಘೋಷಣೆಗಳೂ ಮೊಳಗಿದ್ದವು. ಸಾಲದ್ದಕ್ಕೆ ಸಮಾವೇಶಕ್ಕೆ ನಿರೀಕ್ಷಿತ ಸಂಖ್ಯೆಯಲ್ಲಿ ಜನರೂ ಬಂದಿರಲಿಲ್ಲ. ಹಾಗಾಗಿ ಇನ್ನು ಪ್ರಧಾನಿ ಎದುರೇ ಈ ಅಸಮಾಧಾನ ಸ್ಪೋಟಗೊಂಡು ಮುಜುಗರ ಉಂಟಾಗುವುದು ಬೇಡ ಎಂದು ಸಮಾವೇಶವನ್ನೇ ರದ್ದು ಗೊಳಿಸಲಾಯಿತು ಎಂದು ವೆಬ್ ಸೈಟ್ ವರದಿ ಮಾಡಿದೆ.
ಇತ್ತೀಚೆಗೆ ಫತೇಪುರದಲ್ಲಿ ಆಯೋಜಿತ ಪರಿವರ್ತನಾ ರ್ಯಾಲಿಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಎದುರೇ 'ಮೋದಿ ಮುರ್ದಾಬಾದ್' ಘೋಷಣೆ ಮೊಳಗಿದ್ದು ಮಾತ್ರವಲ್ಲದೆ ಅವರಿಗೆ ಕಪ್ಪು ಬಾವುಟ ಪ್ರದರ್ಶನ ಕೂಡ ಆಗಿತ್ತು ಎಂದು ವೆಬ್ ಸೈಟ್ ಹೇಳಿದೆ.
ಬಹರೈಚ್ ನಲ್ಲಿ ಸಮಾವೇಶ ಪ್ರಾರಂಭವಾಗುವ ಹೊತ್ತಾದರೂ ಸಾಕಷ್ಟು ಕುರ್ಚಿಗಳು ಖಾಲಿಯೇ ಇದ್ದಿದ್ದು ಬಿಜೆಪಿ ಚಿಂತೆಗೆ ಕಾರಣವಾಗಿತ್ತು.









