‘ಮಾಧವಮಂಗಲ’ ಸಭಾಭವನ ಉದ್ಘಾಟಿಸಿ ಕಾಗೋಡು
ಕಾಗೋಡು,
.jpg)
ಸಾಗರ, ಡಿ.11: ಸರಕಾರಿ ಹಾಗೂ ಸಮಾಜದ ಸೌಲಭ್ಯಗಳನ್ನು ಪಡೆದು ವಿದ್ಯಾವಂತರಾಗಿ ಉನ್ನತ ಸ್ಥಾನಕ್ಕೆ ಏರಿದವರು ತಮ್ಮ ಸ್ಥಾನಮಾನದ ಮಿತಿಯಲ್ಲಿ ತಾವು ಬೆಳೆದು ಬಂದ ಸಮಾಜಕ್ಕೆ ಒಂದಿಷ್ಟು ಕೊಡುಗೆ ನೀಡದಿರುವುದು ಖೇದಕರ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪತಿಳಿಸಿದರು. ಇಲ್ಲಿನ ಶಿವಪ್ಪ ನಾಯಕ ನಗರದಲ್ಲಿ ರವಿವಾರ ತಾಲೂಕು ಮೊಗವೀರ ಮಹಾಜನ ಸಂಘದ ಮಾಧವ ಮಂಗಲ ಸಭಾಭವನ ಲೋಕಾರ್ಪಣೆ ಗೊಳಿಸಿ ಅವರು ಮಾತನಾಡುತ್ತಿದ್ದರು. ಸಮಾಜ ಬದಲಾಗಿದೆ.
ವಿದ್ಯಾವಂತರಾದರೆ ಮಾತ್ರ ಸಾಲದು, ಸಂಸ್ಕಾರವಂತರಾಗಬೇಕು. ಸಮಾಜ ನಮ್ಮ ಮೇಲೆ ಇರಿಸಿಕೊಂಡಿರುವ ನಿರೀಕ್ಷೆಯನ್ನು ಎಂದಿಗೂ ಹುಸಿಗೊಳಿಸಬಾರದು. ಮೊಗವೀರ ಸಮಾಜವನ್ನು ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಡಾ.ಜಿ. ಶಂಕರ್ ಅನುಸರಿಸುತ್ತಿರುವ ಕಾರ್ಯಯೋಜನೆ ಅನುಕರಣೀಯ ಎಂದು ಶ್ಲಾಘಿಸಿದರು.
ರಾಜಕಾರಣ ಎನ್ನುವುದು ವ್ಯಾಪಾರೀಕರಣವಲ್ಲ. ನಾನು ಹಿಂದುಳಿದ ವರ್ಗದಿಂದ ರಾಜಕೀ ಯ ಕ್ಷೇತ್ರಕ್ಕೆ ಬಂದಿದ್ದರೂ ಕೆಲವು ತತ್ವ ಸಿದ್ಧಾಂತಗಳನ್ನು ಇರಿಸಿಕೊಂಡು ಸಮಾಜಮುಖಿ ಕೆಲಸಗಳಲ್ಲಿ ತೊಡಗಿದ್ದೇನೆ. ಇದಕ್ಕಾಗಿ ಕೆಲವು ಬಾರಿ ನಿಷ್ಠೂರವಾಗಿ ನಡೆದುಕೊಳ್ಳುತ್ತೇನೆ. ನನ್ನ ವಿಚಾರಧಾರೆಗಳನ್ನು ಕೆಲವರು ಒಪ್ಪುವುದಿಲ್ಲ. ಆದರೆ, ಅಂತಹವರ ಒಪ್ಪುವಿಕೆಯಿಂದ ಸಮಾಜ ಬದಲಾವಣೆ ಖಂಡಿತಾ ಸಾಧ್ಯವಿಲ್ಲ ಎಂದರು.
ಡಾ. ಜಿ.ಶಂಕರ್ ಮಿನಿ ಸಭಾಭವನವನ್ನು ಉದ್ಘಾಟಿಸಿ ಮಾತನಾಡಿದರು. ವೇದಿಕೆಯಲ್ಲಿ ನಗರಸಭಾ ಸದಸ್ಯೆ ಎನ್.ಉಷಾ, ವೈದ್ಯೆ ಡಾ. ರಾಜನಂದಿನಿ, ಉದ್ಯಮಿ ಆನಂದ್ ಸಿ. ಕುಂದರ್ ಕೋಟಾ, ಜಿಲ್ಲಾ ಗಂಗಾಮತಸ್ಥ ಸಮಾಜದ ಅಧ್ಯಕ್ಷ ಕೆಂಚಪ್ಪ, ಮೊಗವೀರ ಸಂಘದ ಜಿಲ್ಲಾಧ್ಯಕ್ಷ ಮಹಾಬಲ ರಾವ್, ಉಡುಪಿ ಜಿಲ್ಲಾ ಮೊಗವೀರ ಯುವಜನ ಸಂಘದ ಅಧ್ಯಕ್ಷ ಗಣೇಶ್ ಕಾಂಚನ್, ಜಯ.ಸಿ. ಕೋಟ್ಯಾನ್, ತಾಲೂಕು ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಮಂಜುನಾಥ್, ರಾಮಣ್ಣ ಹಳೆಇಕ್ಕೇರಿ, ರಾಮಪ್ಪ, ಆನಂದ ಮರಕಾಲ, ಮೈಕ್ ರಾಮಣ್ಣ, ಯೋಗೀಶ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಂದಿನಿ ಶೇಟ್ ಹಾಜರಿದ್ದರು.







