ಥಿಯೇಟರ್‌ನಲ್ಲಿ ರಾಷ್ಟ್ರಗೀತೆ ಪ್ರಸಾರದ ವೇಳೆ ಎದ್ದು ನಿಲ್ಲದ ಯುವಕರಿಗೆ ಹಲ್ಲೆ

ಚೆನ್ನೈ, ಡಿ.11: ಸಿನೆಮಾ ಮಂದಿರದಲಿ ಸಿನೆಮಾ ಪ್ರದರ್ಶನ ಆರಂಭಿಸುವ ಮುನ್ನ ರಾಷ್ಟ್ರಗೀತೆ ಹಾಡಬೇಕು ಮತ್ತು ಈ ಸಂದರ್ಭ ವೀಕ್ಷಕರು ಎದ್ದು ನಿಂತು ಗೌರವ ಸೂಚಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದ ಕೆಲವೇ ದಿನಗಳಲ್ಲಿ, ಈ ವಿಷಯಕ್ಕೆ ಸಂಬಂಧಿಸಿ ಯುವಕರ ಮೇಲೆ ಹಲ್ಲೆ ನಡೆದ ಘಟನೆ ಚೆನ್ನೈಯ ಚಿತ್ರಮಂದಿರದಲ್ಲಿ ನಡೆದಿದೆ.
ಸಿನೆಮಾ ಮಂದಿರದಲ್ಲಿ ರಾಷ್ಟ್ರಗೀತೆ ಪ್ರಸಾರ ಮಾಡಿದಾಗ ಎದ್ದು ನಿಲ್ಲಲಿಲ್ಲ ಎಂಬ ಕಾರಣಕ್ಕೆ ಮೂವರು ಯುವತಿಯರು ಸೇರಿದಂತೆ ಏಳು ಮಂದಿಯ ಮೇಲೆ ತಂಡವೊಂದು ಹಲ್ಲೆ ನಡೆಸಿದೆ. ಚೆನ್ನೈಯ ಎಕ್ಕಾಡುತಂಗಲ್ ಎಂಬಲ್ಲಿರುವ ಕಾಸಿ ಚಿತ್ರಮಂದಿರದಲ್ಲಿ ‘ಚೆನ್ನೈ 28’ ಎಂಬ ಸಿನೆಮಾದ ಪೂರ್ವಾಹ್ನ 11.30ರ ಶೋ ವೀಕ್ಷಿಸಲು ನಗರದ ವಿವಿಧ ಕಾಲೇಜುಗಳ ಏಳು ಮಂದಿ ವಿದ್ಯಾರ್ಥಿಗಳು ತೆರಳಿದ್ದರು. ಇವರೆಲ್ಲಾ ‘ಸಿಪಿಐ(ಎಂಎಲ್) ರೆಸಿಸ್ಟ್ ’ ಎಂಬ ಸಂಘಟನೆಗೆ ಸೇರಿದ್ದವರು ಎನ್ನಲಾಗಿದೆ.
ಸಿನೆಮಾ ಮಂದಿರದಲ್ಲಿ ರಾಷ್ಟ್ರಗೀತೆ ಪ್ರಸಾರ ಆರಂಭವಾದಾಗ ಇವರನ್ನು ಹೊರತಪಡಿಸಿ ಉಳಿದವರೆಲ್ಲಾ ಎದ್ದು ನಿಂತರು. ಈ ವಿಷಯದ ಬಗ್ಗೆ ಸಿನೆಮಾ ಪ್ರದರ್ಶನ ಆರಂಭವಾದ ಬಳಿಕ ಕೆಲವರು ಆಕ್ಷೇಪ ಎತ್ತಿ ಇವರ ಬಗ್ಗೆ ನಿಂದನೆಯ ನುಡಿಗಳನ್ನಾಡತೊಡಗಿದರು ಎಂದು ಲೀನಸ್ ಎಂಬ ವಿದ್ಯಾರ್ಥಿ ‘ನ್ಯೂಸ್ ಮಿನಿಟ್’ ಎಂಬ ಟಿವಿ ವಾಹಿನಿಯ ವರದಿಗಾರರಿಗೆ ತಿಳಿಸಿದ್ದಾನೆ. ಇದಕ್ಕೆ ಸಿನೆಮಾ ಮಂದಿರದಲ್ಲಿದ್ದ ಇತರ ಕೆಲವರೂ ಧ್ವನಿಗೂಡಿಸಿದರು. ಆಗ ಥಿಯೇಟರ್‌ನ ಮ್ಯಾನೇಜರ್ ಆಗಮಿಸಿ ನಮ್ಮನ್ನು ಹೊರಗೆ ಹೋಗಲು ತಿಳಿಸಿದರು. ಆದರೆ ನಾವು ಒಪ್ಪಲಿಲ್ಲ. ಸಿನೆಮಾ ಮುಗಿದ ಬಳಿಕವೇ ಹೊರ ಹೋಗುವುದಾಗಿ ಪಟ್ಟು ಹಿಡಿದು ಕುಳಿತೆವು.
ಸಿನೆಮಾ ಮುಗಿದ ಬಳಿಕ ಕೆಲವರು ನಮ್ಮ ಬಳಿ ಬಂದು ತಗಾದೆ ತೆಗೆದು ಹಲ್ಲೆ ನಡೆಸಿದರು. ಈ ವೇಳೆ ಅಲ್ಲಿ ಡ್ಯೂಟಿಯಲ್ಲಿದ್ದ ಪೊಲೀಸರು ಸುಮ್ಮನಿದ್ದರು. ಇನ್ನೊಮ್ಮೆ ಈ ರೀತಿ ಮಾಡಿದರೆ ಕೊಂದು ಬಿಡುವುದಾಗಿ ಎಚ್ಚರಿಸಿದರು ಎಂದು ಲೀನಸ್ ತಿಳಿಸಿದ್ದಾನೆ.
ರಾಷ್ಟ್ರಗೀತೆ ಪ್ರಸಾರ ಮಾಡಲು ಸಿನೆಮಾ ಮಂದಿರ ಸೂಕ್ತವಾದ ಸ್ಥಳವಲ್ಲ ಎಂಬುದು ನಮ್ಮ ದೃಢವಾದ ನಂಬಿಕೆಯಾಗಿದೆ. ಆದ್ದರಿಂದ ರಾಷ್ಟ್ರಗೀತೆ ಹಾಡುವಾಗ ಎದ್ದು ನಿಲ್ಲಬಾರದು ಎಂದು ಮೊದಲೇ ನಿಶ್ಚಯಿಸಿಕೊಂಡಿದ್ದೆವು ಎಂದು ಆತ ತಿಳಿಸಿದ್ದಾನೆ.
ಹಲ್ಲೆ ಘಟನೆಯ ಬಗ್ಗೆ ತನಿಖೆ ನಡೆಸುವುದಾಗಿ ಚೆನ್ನೈಯ ಸಹಾಯಕ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.







