ಮುಂಬೈನಲ್ಲಿ ಹೆಲಿಕಾಪ್ಟರ್ ಪತನ: ಪೈಲಟ್, ಮಹಿಳೆ ಸಾವು
ಮುಂಬೈ,ಡಿ.11: ಉಪನಗರ ಗೋರೆಗಾಂವ್‌ನ ಆರೆ ಕಾಲನಿಯಲ್ಲಿ ಇಂದು ಹೆಲಿಕಾಪ್ಟರ್‌ವೊಂದು ಪತನಗೊಂಡು ಪೈಲಟ್ ಮತ್ತು ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಇತರ ಇಬ್ಬರಿಗೆ ತೀವ್ರ ಸುಟ್ಟಗಾಯಗಳಾಗಿದ್ದು, ಅವರನ್ನು ಸಮೀಪದ ಸೆವೆನ್ ಹಿಲ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಲಿಕಾಪ್ಟರ್ ಸಂಪೂರ್ಣವಾಗಿ ಸುಟ್ಟುಹೋಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು. ಮಧ್ಯಾಹ್ನ 12ಗಂಟೆಯ ಸುಮಾರಿಗೆ ಈ ದುರಂತ ಸಂಭವಿಸಿದ್ದು, ಮೂರು ಅಗ್ನಿಶಾಮಕ ಯಂತ್ರಗಳು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿವೆ.
ಪತನಗೊಂಡ ರಾಬಿನ್‌ಸನ್ ಆರ್44 ಆ್ಯಸ್ಟ್ರೋ ಹೆಲಿಕಾಪ್ಟರ್ ನಗರದಲ್ಲಿ ಹೆಲಿಕಾಪ್ಟರ್ ವಿಹಾರ ಹಾರಾಟಗಳನ್ನು ನಡೆಸುವ ಅಮನ್ ಏವಿಯೇಷನ್ ಸಂಸ್ಥೆಗೆ ಸೇರಿತ್ತು. ಇಂದು ರವಿವಾರವಾದ್ದರಿಂದ ಜನರು ಹೆಲಿಕಾಪ್ಟರ್ ಹಾರಾಟದ ಮೋಜನ್ನನುಭವಿಸಲು ಬಂದಿದ್ದರು. ಮೃತ ಮಹಿಳೆಯ ಗುರುತನ್ನು ಇನ್ನಷ್ಟೇ ಪತ್ತೆ ಹಚ್ಚಬೇಕಿದ್ದು,ಆಕೆ ಪ್ರಯಾಣಿಕರಲ್ಲಿ ಓರ್ವಳಾಗಿದ್ದಳು ಎಂದು ಶಂಕಿಸಲಾಗಿದೆ.
Next Story





