ಹಳೆಯ 500 ಮತ್ತು 1,000 ರೂ. ನೋಟುಗಳನ್ನು ರದ್ದುಗೊಳಿಸಲು ಆರ್‌ಬಿಐ ಕಾಯ್ದೆಗೆ ತಿದ್ದುಪಡಿ
ಹೊಸದಿಲ್ಲಿ,ಡಿ.11: ನ.9ಕ್ಕೆ ಮೊದಲು ಮುದ್ರಣಗೊಂಡಿರುವ 500 ಮತ್ತು 1,000 ರೂ. ಮುಖಬೆಲೆಯ ನೋಟುಗಳ ಸಿಂಧುತ್ವವನ್ನು ರದ್ದುಗೊಳಿಸಲು ಸರಕಾರವು ಆರ್‌ಬಿಐ ಕಾಯ್ದೆಗೆ ತಿದ್ದುಪಡಿಯನ್ನು ತರುವ ಸಾಧ್ಯತೆಯಿದ್ದು, ಮುಂಬರುವ ಮುಂಗಡಪತ್ರವು ಈ ಬಗ್ಗೆ ಪ್ರಸ್ತಾವನೆಯನ್ನು ಹೊಂದಿರಲಿದೆ. ನೋಟು ರದ್ದತಿ ಪ್ರಕ್ರಿಯೆಯ ಭಾಗವಾಗಿ 500 ಮತ್ತು 1,000 ರೂ. ಮುಖಬೆಲೆಯ ನೋಟುಗಳನ್ನು ಅಸಿಂಧುಗೊಳಿಸಲು ಕಾಯ್ದೆಯೊಂದು ಬರಲಿದ್ದು, ಅದು ಮಾರ್ಚ್ 31ರಿಂದ ಜಾರಿಗೊಳ್ಳಲಿದೆ ಎಂದು ಮೂಲಗಳು ತಿಳಿಸಿದವು.
1978ರಲ್ಲಿ ಕರೆನ್ಸಿ ನೋಟುಗಳನ್ನು ರದ್ದುಗೊಳಿಸಿದಾಗ ಅದಕ್ಕೆ ಅಗತ್ಯವಾದ ಕಾನೂನನ್ನು ಮೊದಲೇ ತರಲಾಗಿತ್ತು. ಈ ಬಾರಿ ಸರಕಾರವು ಆರ್‌ಬಿಐ ಕಾಯ್ದೆಯ ಕಲಂ 26(2)ರಡಿ ಕ್ರಮ ಕೈಗೊಂಡಿದೆ ಎಂದು ಅವು ಹೇಳಿದವು.
ಕಲಂ 26(2)ರಂತೆ ಕೇಂದ್ರ ಸರಕಾರವು ಆರ್‌ಬಿಐನ ಕೇಂದ್ರ ಮಂಡಳಿಯ ಶಿಫಾರಸಿನ ಮೇರೆಗೆ ಗೆಝೆಟ್ ಅಧಿಸೂಚನೆಯ ಮೂಲಕ ನಿರ್ದಿಷ್ಟ ದಿನಾಂಕದಿಂದ ಯಾವುದೇ ಮುಖಬೆಲೆಯ ಯಾವುದೇ ಸರಣಿಯ ಬ್ಯಾಂಕ್ ನೋಟುಗಳು ರದ್ದುಗೊಳ್ಳುತ್ತವೆ ಎಂದು ಘೋಷಿಸಬಹುದಾಗಿದೆ. ನೋಟು ರದ್ದತಿಯ ಬಳಿಕ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸೇರ್ಪಡೆಗೊಳ್ಳದ ಹಣದ ಕುರಿತಂತೆ ಈ ಮೂಲಗಳು, ಅದು ಆರ್‌ಬಿಐನ ಒಟ್ಟು ಆದಾಯಕ್ಕೆ ಸೇರುತ್ತದೆ ಮತ್ತು ಆರ್‌ಬಿಐ ಹೆಚ್ಚಿನ ಡಿವಿಡೆಂಡ್ ಅಥವಾ ವಿಶೇಷ ಡಿವಿಡೆಂಡ್‌ನ ರೂಪದಲ್ಲಿ ಸರಕಾರಕ್ಕೆ ಪಾವತಿ ಮಾಡುವ ಸ್ಥಿತಿಯಲ್ಲಿರುತ್ತದೆ ಎಂದು ವಿವರಿಸಿದವು.
ನ.8ರ ನೋಟು ರದ್ದತಿ ಪ್ರಕಟಣೆಯ ಬಳಿಕ ಬ್ಯಾಂಕುಗಳು 15.5 ಲ.ಕೋ.ರೂ.ಯ ಪೈಕಿ 12 ಲ.ಕೋ.ರೂ. ವೌಲ್ಯದ ಹಳೆಯ ನೋಟುಗಳನ್ನು ಸ್ವೀಕರಿಸಿವೆ. 13 ಲ.ಕೋ. ರೂ. ಬ್ಯಾಂಕಿಗ್ ವ್ಯವಸ್ಥೆಗೆ ಮರಳಲಿದೆ ಎಂದು ಸರಕಾರವು ನಿರೀಕ್ಷಿಸಿದೆ. ಆರ್‌ಬಿಐ ಬ್ಯಾಂಕುಗಳು ಮತ್ತು ಎಟಿಎಂಗಳ ಮೂಲಕ ಸಾರ್ವಜನಿಕರಿಗೆ 4.27 ಲ.ಕೋ.ರೂ.ಗೂ ಅಧಿಕ ಹಣವನ್ನು ವಿತರಿಸಿದೆ.





