ಶೇ.23 ಜನಧನ್ ಖಾತೆ ಖಾಲಿ
ಹೊಸದಿಲ್ಲಿ, ಡಿ.11: ನೋಟು ನಿಷೇಧದ ಬಳಿಕ ಜನಧನ್ ಖಾತೆಗಳಲ್ಲಿ ಒಟ್ಟು ಠೇವಣಿ ಭಾರೀ ಹೆಚ್ಚಾಗಿರುವ ಹೊರತಾಗಿಯೂ, ಸುಮಾರು ಐದನೆ ಒಂದರಷ್ಟು ಖಾತೆಗಳಲ್ಲಿ ಈಗಲೂ ಯಾವುದೇ ಹೊಸ ಠೇವಣಿಯಾಗಿಲ್ಲ. ಡಿ.7ಕ್ಕೆ ಅಂತ್ಯವಾದ ವಾರದಲ್ಲಿ 25.8 ಕೋಟಿ ಜನಧನ್ ಖಾತೆಗಳಿಗೆ ಸೇರಿರುವ ನಿವ್ವಳ ಮೊತ್ತ ರೂ. 288 ಕೋಟಿಯಾಗಿದೆ. ಈ ಮೂಲಕ ಜನಧನ್ ಖಾತೆಗಳಿಗೆ ಠೇವಣಿಯಾಗಿರುವ ಒಟ್ಟು ಮೊತ್ತ ಸುಮಾರು ರೂ. 74,610 ಕೋಟಿಯಾಗಿದೆ.
ನ.8ರಂದು ದೊಡ್ಡ ನೋಟುಗಳು ರದ್ದಾದ ಬಳಿಕ 30 ದಿನಗಳಲ್ಲಿ ಜನಧನ್ ಖಾತೆಗಳಿಗೆ ಒಟ್ಟು ರೂ. 29,000 ಕೋಟಿ ಜಮಾ ಆಗಿದ್ದರೂ, ಶೇ.22.9ರಷ್ಟು ಖಾತೆಗಳು ಶೂನ್ಯ ಶಿಲ್ಕಿನವಾಗಿಯೇ ಉಳಿದಿವೆ.
ಮೊದಲು ಏರಿಕೆ ಕಂಡಿದ್ದ ಜನಧನ್ ಠೇವಣಿ ಬಳಿಕ ವಾರದಿಂದ ವಾರಕ್ಕೆ ಇಳಿಕೆಯಾಗುತ್ತ ಬಂದಿದೆ. ನ.30ಕ್ಕೆ ಕೊನೆಗೊಂಡ ವಾರದಲ್ಲಿ ರೂ. 1,487 ಕೋಟಿ ಈ ಖಾತೆಗಳಲ್ಲಿ ಜಮೆಯಾಗಿತ್ತು. ಹಿಂದಿನ ವಾರದಲ್ಲಿ ಈ ಮೊತ್ತ ರೂ. 8,283 ಕೋಟಿಗಳಿಗೆ ಏರಿದೆ.
ನೋಟು ರದ್ದತಿಯ ಬಳಿಕದ ಒಂದು ವಾರದಲ್ಲಿ ಜನಧನ್ ಠೇವಣಿಯು ರೂ. 18,615.54 ಕೋಟಿಗೆ ಏರಿದ್ದರೆ, ನ.17-23ರ ನಡುವಿನ 7 ದಿನಗಳಲ್ಲಿ ಈ ಪ್ರಮಾಣ ಅರ್ಧದಷ್ಟಕ್ಕಿಳಿದು ರೂ. 8,582.57 ಕೋಟಿಯಷ್ಟೇ ಹರಿದು ಬಂದಿತ್ತು. ಡಿ.7ಕ್ಕೆ 25.8 ಕೋಟಿ ಜನಧನ್ ಖಾತೆಗಳಲ್ಲಿ ಒಟ್ಟು ರೂ. 74,609.50 ಕೋಟಿ ಮೊತ್ತವಿತ್ತು ಎಂದು ವಿತ್ತ ಸಚಿವಾಲಯದ ಮಾಹಿತಿ ತಿಳಿಸಿದೆ. ಜನಧನ್ ಖಾತೆಯಲ್ಲಿ ಠೇವಣಿಗಿರುವ ಮೇಲ್ಮಿತಿ ರೂ. 50 ಸಾವಿರ ಮಾತ್ರ.





