ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಂತೆ ಕೇರಳ ಮುಖ್ಯಮಂತಿಯನ್ನ್ನು ತಡೆದ ಮಧ್ಯಪ್ರದೇಶ ಸರಕಾರ
ತಿರುವನಂತಪುರ,ಡಿ.11: ಶನಿವಾರ ಭೋಪಾಲದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳದಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ತಡೆದ ಮಧ್ಯಪ್ರದೇಶ ಸರಕಾರ, ಪೊಲೀಸ್ ಇಲಾಖೆ ಮತ್ತು ಆರೆಸ್ಸೆಸ್‌ಗಳ ಕ್ರಮ ‘ಅನಾಗರಿಕ’ ಎಂದು ಸಿಪಿಎಂ ರಾಜ್ಯ ಘಟಕವು ಇಂದು ಬಣ್ಣಿಸಿದೆ.
ಇದು ಒಕ್ಕೂಟ ತತ್ತ್ವಗಳನ್ನು ಮತ್ತು ಸಂವಿಧಾನವನ್ನೂ ಉಲ್ಲಂಘಿಸಿದೆ ಎಂದು ರಾಜ್ಯ ಸಿಪಿಎಂ ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ.
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜಸಿಂಗ್ ಚೌಹಾಣ್ ಮತ್ತು ಬಿಜೆಪಿಯ ರಾಷ್ಟ್ರೀಯ ನಾಯಕತ್ವಕ್ಕೆ ಗೊತ್ತಿದ್ದೇ ಈ ಘಟನೆ ನಡೆದಿದೆ ಎಂದು ಪಕ್ಷವು ಆರೋಪಿಸಿದೆ.
ವಿಜಯನ್ ಅವರು ಭೋಪಾಲದ ಕೇರಳ ಸಮಾಜಂ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಳ್ಳಬೇಕಾಗಿತ್ತು. ಅವರು ಇನ್ನೇನು ಅಲ್ಲಿಗೆ ತೆರಳಬೇಕು ಎನ್ನುವಾಗ ಕಾರ್ಯಕ್ರಮದ ವಿರುದ್ಧ ಆರೆಸ್ಸೆಸ್ ಮತ್ತು ಇತರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿರುವುದರಿಂದ ಅಲ್ಲಿಗೆ ಹೋಗದಂತೆ ಮಧ್ಯಪ್ರದೇಶ ಪೊಲೀಸರು ಅವರಿಗೆ ಸೂಚಿಸಿದ್ದರು.
ಈ ಘಟನೆಯು ತನ್ನದೇ ಸ್ವಂತ ರಾಜಧಾನಿಯಲ್ಲಿ ಇನ್ನೊಂದು ರಾಜ್ಯದ ಮುಖ್ಯಮಂತ್ರಿಗೆ ರಕ್ಷಣೆ ನೀಡಲಾಗದ ಬಿಜೆಪಿ ಆಡಳಿತದ ಮಧ್ಯಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಸ್ಥಿತಿಯನ್ನು ಸೂಚಿಸುತ್ತಿದೆ ಎಂದು ಸಿಪಿಎಂ ಪಾಲಿಟ್‌ಬ್ಯೂರೊ ಟೀಕಿಸಿದೆ.
ಪೊಲೀಸರು ಕಾರ್ಯಕ್ರಮ ಸ್ಥಳದ ಎದುರು ಸೇರಿದ್ದ ಸುಮಾರು 250 ಆರೆಸ್ಸೆಸ್ ಪ್ರತಿಭಟನಾಕಾರರನ್ನು ಬಂಧಿಸಬೇಕಾಗಿತ್ತು. ಅದರ ಬದಲಿಗೆ ಅವರು ರಾಜ್ಯದ ಮುಖ್ಯಮಂತ್ರಿಗಳಿಗೆ ತನ್ನ ತವರು ರಾಜ್ಯದ ಜನರನ್ನು ಭೇಟಿಯಾಗಲು ಅನುಮತಿಯನ್ನು ನಿರಾಕರಿಸಿದ್ದಾರೆ ಎಂದು ಪಕ್ಷವು ಹೇಳಿದೆ.
ಸಿಪಿಎಂ ಆರೋಪವನ್ನು ನಿರಾಕರಿಸಿರುವ ಮಧ್ಯಪ್ರದೇಶ ಪೊಲೀಸರು,ಕೇರಳ ಮುಖ್ಯಮಂತ್ರಿಗಳಿಗೆ ರಕ್ಷಣೆಯನ್ನು ಒದಗಿಸದಿರುವ ಪ್ರಶ್ನೆಯೇ ಇಲ್ಲ ಎಂದು ಹೇಳಿದೆ.
ಆರೆಸ್ಸೆಸ್ ಮತ್ತು ಮಧ್ಯಪ್ರದೇಶ ಸರಕಾರದ ವರ್ತನೆಯ ವಿರುದ್ಧ ರಾಜ್ಯದಲ್ಲಿ ಪ್ರತಿಭಟನೆಗೆ ಪಕ್ಷವು ಕರೆ ನೀಡಿದೆ.
ಎಲ್‌ಡಿಎಫ್ ಸಂಚಾಲಕ ವೈಕಂ ವಿಶ್ವಂ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ವಿ.ಎಂ ಸುಧೀರನ್ ಅವರೂ ಈ ಘಟನೆಯನ್ನು ಖಂಡಿಸಿದ್ದಾರೆ.





