ಪನ್ಸಾರೆ ಕೊಲೆ ಪ್ರಕರಣದ ವಿಚಾರಣೆ ವೇಳೆ ಪ್ರತಿವಾದಿಯಾಗಿ ಪರಿಗಣಿಸಲು ತಾವ್ಡೆ ಮನವಿ
ಮುಂಬೈ, ಡಿ.11: ಪನ್ಸಾರೆ ಕೊಲೆ ಪ್ರಕರಣದ ವಿಚಾರಣೆಗೆ ತಡೆಯಾಜ್ಞೆ ಬಯಸಿ ಮಹಾರಾಷ್ಟ್ರ ಸರಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ಪ್ರತಿವಾದಿಯಾಗಿ ಪರಿಗಣಿಸುವಂತೆ ವಿಚಾರವಾದಿ ನರೇಂದ್ರ ದಾಭೋಲ್ಕರ್ ಮತ್ತು ಆರ್‌ಟಿಐ ಕಾರ್ಯಕರ್ತ ಗೋವಿಂದ ಪನ್ಸಾರೆ ಹತ್ಯೆ ಪ್ರಕರಣಗಳ ಆರೋಪಿ ವೀರೇಂದ್ರ ತಾವ್ಡೆ ಬಾಂಬೆ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ. ಸ್ಕಾಟ್‌ಲ್ಯಾಂಡ್ ಯಾರ್ಡ್ ಪೊಲೀಸ್ ಲ್ಯಾಬೊ ರೇಟರಿಯಿಂದ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಲಭಿಸುವವರೆಗೆ ವಿಚಾರಣೆಗೆ ತಡೆಯಾಜ್ಞೆ ನೀಡಬೇಕೆಂದು
ಪನ್ಸಾರೆ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ರಾಜ್ಯ ಸಿಐಡಿ ಇಲಾಖೆಯವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಪನ್ಸಾರೆ, ದಾಭೋಲ್ಕರ್ ಮತ್ತು ಪ್ರೊ.ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣಗಳು ಒಂದಕ್ಕೊಂದು ತಳಕು ಹಾಕಿಕೊಂಡಿವೆಯೇ ಎಂಬುದನ್ನು ತಿಳಿಯಲು ಈ ವರದಿ ಮುಖ್ಯವಾಗಿದೆ ಎಂದು ಸಿಐಡಿ ತಿಳಿಸಿದೆ. ದಾಭೋಲ್ಕರ್‌ರನ್ನು ಪುಣೆಯಲ್ಲಿ 2013ರ ಆಗಸ್ಟ್ 20ರಂದು, ಪನ್ಸಾರೆಯವರನ್ನು 2015ರ ಫೆಬ್ರವರಿ 16ರಂದು ಕೊಲ್ಹಾಪುರದಲ್ಲಿ ಮತ್ತು ಕಲಬುರ್ಗಿಯವರನ್ನು 2015ರ ಆಗಸ್ಟ್ 30ರಂದು ಕಲಬುರ್ಗಿಯಲ್ಲಿ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿ ಸಮೀರ್ ಗಾಯಕ್‌ವಾಡ್ ವಿರುದ್ಧ ಆರೋಪಪಟ್ಟಿ ದಾಖಲಿಸುವುದಕ್ಕೆ ತಡೆಯಾಜ್ಞೆ ನೀಡಬೇಕೆಂದು ಇದಕ್ಕೂ ಮುನ್ನ ಸಿಐಡಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಪರಿಗಣಿಸಿ ಮಧ್ಯಾಂತರ ತಡೆಯಾಜ್ಞೆ ನೀಡಿತ್ತು. ಬಲಪಂಥೀಯ ತಂಡವಾಗಿರುವ ಸನಾತನ ಸಂಸ್ಥೆಯ ಸದಸ್ಯ ಎನ್ನಲಾಗಿರುವ ತಾವ್ಡೆಯನ್ನು ಈ ವರ್ಷದ ಜೂನ್ 10ರಂದು ದಾಭೋಲ್ಕರ್ ಹತ್ಯೆ ಆರೋಪದಲ್ಲಿ ಸಿಬಿಐ ಬಂಧಿಸಿತ್ತು. ಪನ್ಸಾರೆ ಹತ್ಯೆ ಪ್ರಕರಣದಲ್ಲಿ ಕೂಡಾ ತಾವ್ಡೆ ಆರೋಪಿ ಎಂದು ಸಿಐಡಿ ತಿಳಿಸಿತ್ತು. ಪ್ರಕರಣದ ವಿಚಾರಣೆ ವೇಳೆ ಅರ್ಜಿದಾರನನ್ನು ಪ್ರತಿವಾದಿ ಎಂದು ಸೇರಿಸದಿದ್ದಲ್ಲಿ ಅರ್ಜಿದಾರನ ಹಿತಾಸಕ್ತಿಗೆ ಅಪಾರ ಹಾಗೂ ತುಂಬಲಾರದ ನಷ್ಟ ಉಂಟಾಗುತ್ತದೆ ಎಂದು ತಾವ್ಡೆ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಲಾಗಿದೆ.







