ಬಿಜೆಪಿ ಆಡಳಿತದಲ್ಲಿ ಆರೆಸ್ಸೆಸ್ ವಿರುದ್ಧ ಕ್ರಮಕ್ಕೆ ಪೊಲೀಸರ ಹಿಂದೇಟು
ಪಿಣರಾಯಿ ವಿಜಯನ್ ಆರೋಪ
ಕೊಚ್ಚಿ, ಡಿ.11: ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಪೊಲೀಸರು ಆರೆಸ್ಸೆಸ್ ವಿರುದ್ಧ ಕ್ರಮ ಕೈಗೊಳ್ಳಲು ಹಿಂಜರಿಯುತ್ತಿದ್ದಾರೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಿಡಿಕಾರಿದ್ದಾರೆ. ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆಯುವ ಕಾರ್ಯಕ್ರಮವೊಂದರಲ್ಲಿ ವಿಜಯನ್ ಪಾಲ್ಗೊಳ್ಳುವವರಿದ್ದರು. ಆದರೆ ಸಂಘ ಪರಿವಾರದ ಕಾರ್ಯಕರ್ತರು ಈ ಕಾರ್ಯಕ್ರಮ ವಿರೋಧಿಸಿ ಪ್ರತಿಭಟನೆ ಹಮ್ಮಿಕೊಂಡಿರುವ ಕಾರಣ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಮಧ್ಯಪ್ರದೇಶ ರಾಜ್ಯದ ಪೊಲೀಸರು ವಿಜಯನ್‌ರಿಗೆ ಸಲಹೆ ಮಾಡಿದ್ದರು ಎನ್ನಲಾಗಿದೆ. ಭೋಪಾಲ್‌ನಲ್ಲಿ ತನಗಾದ ಅನುಭವ ಸಂಘ ಪರಿವಾರದ ಸಂಸ್ಕೃತಿ ಮತ್ತು ಅದಕ್ಕೆ ಸರಕಾರ ನೀಡುತ್ತಿರುವ ಸಹಕಾರದ ಪ್ರತಿಬಿಂಬವಾಗಿದೆ ಎಂದು ವಿಜಯನ್ ಟೀಕಿಸಿದ್ದಾರೆ. ರಾಜ್ಯವೊಂದರ ಮುಖ್ಯಮಂತ್ರಿ ಪಾಲ್ಗೊಳ್ಳುವ ಕಾರ್ಯಕ್ರಮದಲ್ಲಿ ವಿನಾಕಾರಣ ಆರೆಸ್ಸೆಸ್‌ನವರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಇದರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಪೊಲೀಸರು ಕಾರ್ಯಕ್ರಮದಲ್ಲಿ ಭಾಗವಹಿಸಬೇಡಿ ಎಂದು ಮುಖ್ಯಮಂತ್ರಿಗೇ ಸಲಹೆ ನೀಡುತ್ತಿದ್ದಾರೆ. ಏನಿದರ ಅರ್ಥ ಎಂದವರು ಪ್ರಶ್ನಿಸಿದರು. ಭೋಪಾಲದ ಕೇರಳ ಸಮಾಜದವರು ಶನಿವಾರದಂದು ವಿಜಯನ್ ಅವರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಬಿಎಸ್‌ಎಸ್ ಕಾಲೇಜಿನಲ್ಲಿ ಆಯೋಜಿಸಿದ್ದು ವಿಜಯನ್ ಆಹ್ವಾನ ಒಪ್ಪಿಕೊಂಡಿದ್ದರು. ಆದರೆ ಕಾರ್ಯಕ್ರಮ ವಿರೋಧಿಸಿ ಸಂಘ ಪರಿವಾರದವರು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿರುವ ಕಾರಣ ಕಾರ್ಯಕ್ರಮದಲ್ಲಿ ಭಾಗವಹಿಸಬೇಡಿ ಎಂದು ಮಧ್ಯಪ್ರದೇಶದ ಪೊಲೀಸರು ಸಲಹೆ ನೀಡಿದ್ದರು ಎಂದು ಸಿಪಿಐ(ಎಂ) ದೂರಿದೆ. ಇದಾದ ಬಳಿಕ ಕಾರ್ಯಕ್ರಮವನ್ನು ರದ್ದುಪಡಿಸಲಾಗಿತ್ತು. ಪೊಲೀಸರು 20 ಮಂದಿ ಪ್ರತಿಭಟನಾಕಾರರನ್ನು ಬಂಧಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭೋಪಾಲದ ಡಿಐಜಿ ರಮಣ್‌ಸಿಂಗ್ ಸಿಕನ್‌ವರ್ ಅವರು, ಭದ್ರತಾ ಕಾರಣದ ಹಿನ್ನೆಲೆಯಲ್ಲಿ ಸ್ವಲ್ಪ ತಡವಾಗಿ ಕಾರ್ಯಕ್ರಮಕ್ಕೆ ತೆರಳುವಂತೆ ಮುಖ್ಯಮಂತ್ರಿ ವಿಜಯನ್‌ರಿಗೆ ಸೂಚಿಸಲಾಗಿತ್ತು. ಆದರೆ ಭದ್ರತೆ ಒದಗಿಸಲು ಅಸಾಧ್ಯ ಎಂದು ನಾವು ಹೇಳಿಲ್ಲ. ಆದರೆ ವಿಜಯನ್ ಕಾರ್ಯಕ್ರಮದ ಸ್ಥಳಕ್ಕೆ ಭೇಟಿ ನೀಡದಿರಲು ನಿರ್ಧರಿಸಿದರು. ಆದ್ದರಿಂದ ಕಾರ್ಯಕ್ರಮ ರದ್ದಾಗಿದೆ ಎಂದು ತಿಳಿಸಿದ್ದಾರೆ.





