ಕನ್ನಡ ಸಾಹಿತ್ಯದಲ್ಲಿ ದಲಿತ ಕೃತಿಗಳ ವಿಮರ್ಶೆಗಳು ವಿರಳ: ಡಾ.ಮೂಡ್ನಾಕೂಡು
.gif)
ಮಂಗಳೂರು, ಡಿ.13: ಕಳೆದ ನಾಲ್ಕು ದಶಕಗಳಲ್ಲಿ ಸಾಕಷ್ಟು ದಲಿತ ಸಾಹಿತ್ಯ ಕೃತಿಗಳು ಬಂದಿವೆ. ಆದರೆ ದಲಿತ ಸಾಹಿತ್ಯಗಳ ಬಗ್ಗೆ ಉತ್ತಮ ವಿಮರ್ಶೆಗಳು ಹೆಚ್ಚಾಗಿ ಬಂದಿಲ್ಲ ಎಂದು ಹಿರಿಯ ಕವಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ತಿಳಿಸಿದ್ದಾರೆ.
ಅಂಬೇಡ್ಕರ್‌ರ 125 ವರ್ಷಾಚರಣೆಯ ಪ್ರಯುಕ್ತ ವಿಶೇಷ ಘಟಕ ಯೋಜನೆಯಡಿ ನಗರದ ಸಂದೇಶ ಸಭಾಂಗಣದಲ್ಲಿ ಹಮ್ಮಿಕೊಂಡ ಮೂರು ದಿನಗಳ ದಲಿತ ಕಾವ್ಯ ಮೀಮಾಂಸೆ ಕಮ್ಮಟವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಭಾರತದಲ್ಲಿ ಎರಡು ಜಗತ್ತಿದೆ. ಒಂದು ಸ್ಪರ್ಶ್ಯ ಇನ್ನೊಂದು ಅಸ್ಪಶ್ಯ. ಇವುಗಳ ನಡುವೆ ಅಗಾಧವಾದ ಕಂದರವಿದೆ. ಇವುಗಳ ನಡುವೆ ಕೊಡುಕೊಳ್ಳುವಿಕೆ ನಡೆದಿಲ್ಲ. ಆ ಕಾರಣದಿಂದ ದಲಿತ ಸಾಹಿತ್ಯವನ್ನು ಅಂಗಳದ ಹೊರಗೆ ಇಟ್ಟು ನೋಡಲಾಗಿದೆ. ಮುಖ್ಯವಾಹಿನಿಗಳ ಸಾಹಿತ್ಯವಾಗಿ ಪರಿಗಣಿಸದೆ ಕಡೆಗಣಿಸಲಾಗಿದೆ. ದಲಿತ ಸಾಹಿತ್ಯಗಳು ಸಮೃದ್ಧವಾಗಿ ಸೃಷ್ಟಿಯಾಗಿದ್ದರೂ ದಲಿತ ಮೀಮಾಂಸೆ ಬಾಲನಡಿಗೆಯಲ್ಲಿ ಸಾಗುತ್ತಿರುವ ಬಗ್ಗೆ ಕಾರಣಗಳನ್ನು ಕಂಡು ಹಿಡಿಯಬೇಕಾಗಿದೆ. ದಲಿತರ ಕುರಿತಾದ ಯಾವುದೇ ಕಾರ್ಯಕ್ರಮಗಳು ಮುಖ್ಯ ವಾಹಿನಿಯಲ್ಲಿ ನಡೆಯದೆ ‘ವಿಶೇಷ ಘಟಕ ’ಯೋಜನೆಯಡಿಯಲ್ಲೇ ಪರಿಗಣಿಸಲ್ಪಡುತ್ತಿರುವುದು ದೌರ್ಭಾಗ್ಯ ಎಂದು ಅವರು ವ್ಯಂಗ್ಯವಾಡಿದರು.
ದಲಿತ ಕಾವ್ಯ ದುಃಖವನ್ನು ಹೊರಗೆಡಹುವ ಮಾರ್ಗ:
ದಲಿತರು ತಮ್ಮ ದುಃಖವನ್ನು ಕಾವ್ಯಗಳ ಮೂಲಕ ಹೊರಗೆಡಹುತ್ತಿದ್ದಾರೆ. ಕಾವ್ಯವು ದಲಿತರಿಗೆ ದುಃಖ ನಿವಾರಣೆಗೆ ಒಂದು ಮಾರ್ಗವಾಗಿ ಗೋಚರಿಸಿತು. ದಲಿತ ಸಾಹಿತ್ಯ ಜಡವಾಗಿರುವ ಸಮಾಜವನ್ನು ಎಚ್ಚರಿಸುವ ಕೆಲಸ ಮಾಡಿತು. ಮುಖ್ಯ ವಾಹನಿಯ ವ್ಯವಸ್ಥೆಯ ವಿರುದ್ಧವೇ ದಲಿತ ಸಾಹಿತ್ಯ ರಚನೆಯಾಗಿರುವುದರಿಂದ ಅವುಗಳ ಬಗ್ಗೆ ಹೆಚ್ಚು ವಿಮರ್ಶೆಗಳು ಬರದಿರಲು ಕಾರಣವಿರಬೇಕು. ವಚನಕಾರರು ದೇವರನ್ನು ಮಾನವೀಕರಣಗೊಳಿಸಿದಂತೆ ದಲಿತ ಸಾಹಿತ್ಯವು ಈ ನೆಲೆಗೆ ಹೆಚ್ಚು ಒತ್ತು ನೀಡಿದೆ. ದಲಿತ ಸಾಹಿತ್ಯ ಸಮಾಜದ ವಾಸ್ತವ ಚಿತ್ರಣಗಳನ್ನು ಕಟ್ಟಿಕೊಟ್ಟಿದೆ. ಅದರಿಂದಾಗಿ ಅವುಗಳು ಶಕ್ತಿಯುತವಾಗಿದೆ. ದಲಿತ ಸಾಹಿತ್ಯ ಅಂಬೇಡ್ಕರರ ಚಿಂತನೆಯ ಹಾದಿಯಲ್ಲಿ ಸಾಗಿದೆ. ದಲಿತ ಸಾಹಿತ್ಯದ ಬಗ್ಗೆ ಇನ್ನಷ್ಟು ಸಂಶೋಧನೆಯಾಗಬೇಕಾಗಿದೆ ಎಂದು ಮೂಡ್ನಾಕೋಡು ಅಭಿಪ್ರಾಯಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಾಹಿತ್ಯ ಅಕಾಡಮಿಯ ಅಧ್ಯಕ್ಷೆ ಮಾಲತಿ ಪಟ್ಟಣ ಶೆಟ್ಟಿ ಮಾತನಾಡಿ, ದಲಿತ ಸಾಹಿತ್ಯದ ಜೊತೆ ಜೊತೆಯಾಗಿ ಸ್ತ್ರಿ ಸಂವೇದಿ ಸಾಹಿತ್ಯ ಬೆಳೆದು ಬಂದಿದೆ. ಆಯಾ ಕಾಲದ ಸಾಮಾಜಿಕ ಒತ್ತಡಗಳ ನಡುವೆ ಈ ಸಾಹಿತ್ಯ ಪ್ರಾಕಾರಗಳು ಹುಟ್ಟಿಕೊಂಡಿದೆ. ದಲಿತ ಸಾಹಿತ್ಯ ಸಮಾನತೆ, ಪ್ರಜಾಸತ್ತತೆಯ ಕಡೆಗೆ ಮುಖ ಮಾಡಿದೆ. ಈ ಸಾಹಿತ್ಯ ಪ್ರಕಾರ ಕನ್ನಡ ಸಾಹಿತ್ಯದ ಮಹತ್ವದ ಭಾಗ.ವೌಖಿಕವಾಗಿರುವ ದಲಿತ ಸಾಹಿತ್ಯದ ಸಂಗ್ರಹ ಹಾಗೂ ಸಂಶೋಧನಾ ಕಾರ್ಯ ಸಂಶೋಧಕರಿಂದ ಆಗಬೇಕು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಡಾ.ಶಿವರಾಮ ಶೆಟ್ಟಿ, ದಲಿತ ಸಾಹಿತ್ಯ ಸಮಾನತೆ, ಸ್ವಾತಂತ್ರ, ಆತ್ಮ ಗೌರವ ವಿಮೋಚನೆಯ ನೆಲೆಯ ಬಿಡುಗಡೆಯ ಪರಕಲ್ಪನೆಯೊಂದಿಗೆ ಬೆಳೆದು ಬಂದಿದೆ. ಸಾಹಿತ್ಯ ವ್ಯವಸ್ಥೆಯ ಚೌಕಟ್ಟಿನಲ್ಲಿ ಮುರಿದು ಕಟ್ಟುವ ಯೋಚನೆಗಳನ್ನು ದಲಿತ ಸಾಹಿತ್ಯ ಒಳಗೊಂಡಿದೆ. ದಲಿತ ಮೀಮಾಂಸೆ ಲೋಕ ಮೀಮಾಂಸೆಯಾಗಿ ರೂಪುಗೊಂಡಿದೆ. ಪ್ರಚಲಿತ ದಲಿತರ ರಾಜಕೀಯ ಹಕ್ಕನ್ನು ಮಂಡಿಸುವ ವ್ಯವಸ್ಥೆ, ದಲಿತರ ಅನುಭವ, ದಲಿತರ ಒಳ ಹಂದರ ಅಚರಣಾ ಕ್ರಮಗಳ ಬಗ್ಗೆ ಕಮ್ಮಟದಲ್ಲಿ ಚಿಂತನೆ ನಡೆಯಬೇಕಾಗಿದೆ ಎಂದು ಅಭಿಪ್ರಾಯಿಸಿದರು.
ಡಾ.ಅಪ್ಪಗೆರೆ ಸೋಮಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸದಸ್ಯ ಸಂಚಾಲಕ ಮೇಟಿ ಮುದಿಯಪ್ಪ, ರವಿಕುಮಾರ್, ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನದ ನಿರ್ದೇಶಕ ವಂ.ವಿಕ್ಟರ್ ವಿಜಯ್ ಲೋಬೊ, ಕರ್ನಾಟಕ ಸಾಹಿತ್ಯ ಅಕಾಡಮಿಯ ರಿಜಿಸ್ಟ್ರಾರ್ ಭಾಗ್ಯಾ ಕುಮಾರ ಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.
ಕನ್ನಡ ಸಂಸ್ಕೃತಿ ಇಲಾಖೆ, ಕರ್ನಾಟಕ ಸಾಹಿತ್ಯ ಅಕಾಡಮಿ ಹಾಗೂ ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.







