ಅಂಬೇಡ್ಕರ್ ಜನ್ಮವರ್ಷಾಚರಣೆ ಪ್ರಯುಕ್ತ ವರ್ಷವಿಡೀ ಸಮಾಜಮುಖಿ ಚಟುವಟಿಕೆ- ಸಂಜೀವ ಮಠಂದೂರು

ಪುತ್ತೂರು , ಡಿ.13 : ಡಾ. ಬಿ.ಆರ್.ಅಂಬೇಡ್ಕರ್ ಅವರ 125 ನೇ ಜನ್ಮವರ್ಷಾಚರಣೆಯ ಪ್ರಯುಕ್ತ, ಬಿಜೆಪಿ ವರ್ಷವಿಡಿ ಸಮಾಜಮುಖಿ ಚಟುವಟಿಕೆ ನಡೆಸಲು ಉದ್ದೇಶಿಸಿದೆ. ಅದರಂತೆ ಪ್ರತಿ ತಿಂಗಳ 14 ನೇ ತಾರೀಕಿನಂದು ರಕ್ತದಾನದಂತಹ ಹತ್ತು ಹಲವು ಸಮಾಜಮುಖಿ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಅವರು ಹೇಳಿದರು.
ಬಿಜೆಪಿ ನಗರ ಮಂಡಲ ಮಹಿಳಾ ಮೋರ್ಚಾ, ನಗರ ಯುವ ಮೋರ್ಚಾ, ಅಲ್ಪಸಂಖ್ಯಾತ ಘಟಕ, ಹಿಂದುಳಿದ ವರ್ಗ, ಎಸ್‌ಸಿ-ಎಸ್‌ಟಿ ಮೋರ್ಚಾಗಳ ಸಮಿತಿಯ ಸಹಯೋಗದಲ್ಲಿ ಡಾ.ಅಂಬೇಡ್ಕರ್ ಅವರ 125 ಜನ್ಮವರ್ಷಾಚರಣೆ ಅಂಗವಾಗಿ ಮಂಗಳವಾರ ರೋಟರಿ ಬ್ಲಡ್ ಬ್ಯಾಂಕ್‌ನಲ್ಲಿ ನಡೆದ ರಕ್ತದಾನ, ರಕ್ತ ವರ್ಗೀಕರಣ ಶಿಬಿರದಲ್ಲಿ ಅವರು ಮಾತನಾಡಿದರು.
ದುರ್ಬಲ ವರ್ಗದವರನ್ನು ಸಮಾಜದ ಮುಖ್ಯವಾಹಿನಿಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಅಂಬೇಡ್ಕರ್ ಅವರ ವಿಚಾರಧಾರೆಗಳು ಆವಶ್ಯಕವಾಗಿದ್ದು, ಪಕ್ಷದ ಪ್ರತಿಯೊಂದು ಘಟಕಗಳು ಸಮಾಜದ ಅಭ್ಯುಧಯಕ್ಕಾಗಿ ಕಾರ್ಯಪ್ರವೃತರಾಗಿವೆ ಎಂದು ಅವರು ತಿಳಿಸಿದರು.
ಬಿಜೆಪಿ ರಾಜ್ಯ ಸಹ ವಕ್ತಾರೆ ಸುಲೋಚನಾ ಜಿ.ಕೆ.ಭಟ್ ಅವರು ಉದ್ಘಾಟಿಸಿದರು.
ರಕ್ತದಾನದಂತಹ ಸಮಾಜಮುಖಿ ಕಾರ್ಯಗಳು ಸೇವಾ ಕಾರ್ಯಕ್ಕೆ ದೊಡ್ಡ ಅವಕಾಶ ಒದಗಿಸುತ್ತದೆ. ಅದು ಪಕ್ಷದ ಬೆಳವಣಿಗೆಗೂ ಸಹಕಾರಿ ಆಗುತ್ತದೆ ಎಂದು ಅವರು ಹೇಳಿದರು.
ನಗರ ಮಹಿಳಾ ಮೋರ್ಚಾ ಸಮಿತಿಯ ಅಧ್ಯಕ್ಷೆ ವಿದ್ಯಾಗೌರಿ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಬಿಜೆಪಿ ಗ್ರಾಮಾಂತರ ಮಂಡಲ ಸಮಿತಿಯ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರ ಮಂಡಲ ಸಮಿತಿಯ ಅಧ್ಯಕ್ಷ ಜೀವಂಧರ್ ಜೈನ್, ಪ್ರಧಾನ ಕಾರ್ಯದರ್ಶಿ ರಾಮದಾಸ್ ಹಾರಾಡಿ, ಸುಂದರ ಪೂಜಾರಿ, ನಗರಸಭೆಯ ಉಪಾಧ್ಯಕ್ಷ ವಿಶ್ವನಾಥ ಗೌಡ, ಸದಸ್ಯ ರಾಜೇಶ್ ಬನ್ನೂರು, ಬಿಜೆಪಿ ಕ್ಷೇತ್ರ ಸಮಿತಿಯ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಹೇರಳೆ, ಪಕ್ಷದ ಪ್ರಮುಖರಾದ ಚಂದ್ರಶೇಖರ್ ರಾವ್ ಬಪ್ಪಳಿಗೆ, ಗೌರಿ ಎಚ್.ಬನ್ನೂರು ಮತ್ತಿತರರು ಉಪಸ್ಥಿತರಿದ್ದರು.







