ಪುಟಾಣಿ ಫುಟ್ಬಾಲ್ ಅಭಿಮಾನಿಯನ್ನು ಭೇಟಿಯಾದ ಮೆಸ್ಸಿ

ದುಬೈ, ಡಿ.13: ಪ್ಲಾಸ್ಟಿಕ್ ಬ್ಯಾಗ್‌ನಿಂದ ನಿರ್ಮಿಸಲ್ಪಟ್ಟ ಲಿಯೊನೆಲ್ ಮೆಸ್ಸಿಯ 10 ನಂಬರ್‌ನ ಜರ್ಸಿಯನ್ನು ಧರಿಸಿ ಆನ್‌ಲೈನ್‌ನಲ್ಲಿ ಹೊಸ ಸಂಚಲನ ಮೂಡಿಸಿದ್ದ ಅಫ್ಘಾನಿಸ್ತಾನದ ಬಾಲಕ ಮುರ್ತಝಾ ಅಹ್ಮದಿಯ ಕನಸು ನನಸಾಗಿದೆ.
ಪೆನ್ನಿನಿಂದ ಮೆಸ್ಸಿ ಎಂದು ಬರೆದಿದ್ದ ಪ್ಲಾಸ್ಟಿಕ್ ಜರ್ಸಿಯನ್ನು ಧರಿಸಿ ಜನವರಿಯಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಪ್ರಸಿದ್ಧಿಗೆ ಬಂದಿದ್ದ ಆರರ ಹರೆಯದ ಬಾಲಕ ಅಹ್ಮದಿ ಅರ್ಜೆಂಟೀನದ ಮೆಸ್ಸಿ ಸಹಿತ ವಿಶ್ವದ ಗಮನ ತನ್ನತ್ತ ಸೆಳೆದಿದ್ದರು. ಮೆಸ್ಸಿ ಅಭಿಮಾನದ ದ್ಯೋತಕವಾಗಿ ತನ್ನ ಹಸ್ತಾಕ್ಷರವಿರುವ ಜರ್ಸಿಯನ್ನು ಅಹ್ಮದಿಗೆ ಕಳುಹಿಸಿಕೊಟ್ಟಿದ್ದರು.
ಇದೀಗ ಈ ಇಬ್ಬರು ದೋಹಾದಲ್ಲಿ ಮುಖಾಮುಖಿಯಾಗಿದ್ದಾರೆ. ಮೆಸ್ಸಿ ತಮ್ಮ ದೊಡ್ಡ ಅಭಿಮಾನಿಯೊಬ್ಬರನ್ನು ಭೇಟಿಯಾಗಿದ್ದಾರೆ ಎಂದು ಬಣ್ಣಿಸಿರುವ 2022ರ ಕತರ್ ವಿಶ್ವಕಪ್‌ನ ಆಯೋಜನಾ ಸಮಿತಿ ಅವರಿಬ್ಬರು ಭೇಟಿಯಾಗಿರುವ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಾಕಿದೆ. ಸ್ಥಳೀಯ ತಂಡ ಅಲ್ ಅಹ್ಲ್ ಸ್ಫೋರ್ಟ್ಸ್ ಕ್ಲಬ್ ವಿರುದ್ಧ ಕತರ್ ಏರ್‌ವೇಸ್ ಮಂಗಳವಾರ ಆಯೋಜಿಸಿದ್ದ ಸೌಹಾರ್ದ ಫುಟ್ಬಾಲ್ ಪಂದ್ಯದಲ್ಲಿ ಪಾಲ್ಗೊಳ್ಳಲು ಲಾಲಿಗದ ದೈತ್ಯ ತಂಡ ಬಾರ್ಸಿಲೋನ ಕತರ್‌ಗೆ ಆಗಮಿಸಿತ್ತು. ಈ ವೇಳೆ ಮೆಸ್ಸಿ ಅವರು ಬಾಲಕನನ್ನು ಭೇಟಿಯಾಗಿ ಮುದ್ದಾಡಿದ್ದಾರೆ.

ಅಫ್ಘಾನಿಸ್ತಾನದ ಪೂರ್ವ ಪ್ರಾಂತ್ಯದ ಜಗ್ಹೋರಿ ಜಿಲ್ಲೆಯಿಂದ 3,000 ಕಿ.ಮೀ.ದೂರ ಪ್ರಯಾಣಿಸಿ ಕತರ್‌ಗೆ ಬಂದಿರುವ ಬಾಲಕ ಅಹ್ಮದಿ ತನ್ನ ನೆಚ್ಚಿನ ಆಟಗಾರನನ್ನು ಭೇಟಿಯಾಗಿ ಸಂತಸಪಟ್ಟಿದ್ದಾನೆ.
ಅಫ್ಘಾನಿಸ್ತಾನ ಫುಟ್ಬಾಲ್ ಫೆಡರೇಶನ್ ಈ ಹಿಂದೆ ಮೆಸ್ಸಿ ಹಾಗೂ ಮುರ್ತಝಾರನ್ನು ಸ್ಪೇನ್‌ನಲ್ಲಿ ಭೇಟಿಯಾಗಿಸಲು ವ್ಯವಸ್ಥೆ ಮಾಡಿತ್ತು. ಆದರೆ,ಇದು ಸಾಧ್ಯವಾಗಿರಲಿಲ್ಲ.







