ಮೋದಿ ಬಡವರ ವಿರುದ್ಧ ಯುದ್ಧ ಸಾರುತ್ತಿದ್ದಾರೆ: ನೋಟು ರದ್ದತಿಯ ಬಗ್ಗೆ ರಾಹುಲ್

ದಾದ್ರಿ(ಉ.ಪ್ರ.) ಡಿ.13: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇಂದು ನೋಟು ರದ್ದತಿಯ ಕುರಿತು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದು, ನಗದು ರಹಿತ ಆರ್ಥಿಕತೆಯ ಚಿಂತನೆಯಿಂದಾಗಿ ಬಡವರಲ್ಲಿ ಹಣವಿಲ್ಲವಾಗಿದೆ. ಅವರ ಶ್ರಮದ ಗಳಿಕೆಯನ್ನು ದೋಚಲಾಗಿದೆಯೆಂದು ಆರೋಪಿಸಿದ್ದಾರೆ.
ಅ.8ರ ರಾತ್ರಿಯ ಘೋಷಣೆಯ ಮೂಲಕ ಮೋದಿ ದೇಶದ ಬಡವರ ವಿರುದ್ಧ ಯುದ್ಧ ಸಾರಿದ್ದಾರೆ. ಈ ಕ್ರಮ ಕಪ್ಪು ಹಣವನ್ನು ಬಿಳಿಯಾಗಿಸಲು ಸಹಾಯ ಮಾಡಿದೆಯೆಂದು ಅವರು ಹೇಳಿದ್ದಾರೆ.
ಬೆರಳೆಣಿಕೆಯಷ್ಟು ಕೈಗಾರಿಕೋದ್ಯಮಿಗಳಿಗೆ ಸಹಾಯ ಮಾಡಲು ಹಾಗೂ ಅವರಿಗೆ ರೂ.8 ಲಕ್ಷ ಕೋಟಿಯಷ್ಟು ಸಾಲ ನೀಡಿರುವ ಬ್ಯಾಂಕ್‌ಗಳ ಸಾಲ ತೀರಿಸಲು ನೋಟು ರದ್ದು ಮಾಡುವ ಮೂಲಕ ಬಿಜೆಪಿ ಸರಕಾರವು ಬಡವರ ಹಣವನ್ನು ತಡೆದಿದೆಯೆಂದು ರಾಹುಲ್ ದೂರಿದ್ದಾರೆ.
ಇಲ್ಲಿನ ಸಗಟು ಮಾರುಕಟ್ಟೆಯೊಂದರಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ಪ್ರಾಮಾಣಿಕ ಜನರನ್ನು ಬೀದಿಗೆ ತಂದಿದ್ದಾರೆ. ಶ್ರೀಮಂತರು ಹಾಗೂ ಭ್ರಷ್ಟರು ಬ್ಯಾಂಕ್‌ಗಳ ಹಿಂಬಾಗಿಲ ಮೂಲಕ ಹಣ ಪಡೆಯುತ್ತಿದ್ದಾರೆಂದು ಆರೋಪಿಸಿದ್ದಾರೆ.
ಬಡವರು ತಮ್ಮ ಹಣವನ್ನು ಬ್ಯಾಂಕ್‌ಗಳಲ್ಲಿ ಠೇವಣಿಯಿರಿಸುವಂತೆ ಮಾಡಿ, ಉದ್ಯಮಿಗಳು ಬ್ಯಾಂಕ್‌ಗಳಲ್ಲಿ ಮಾಡಿರುವ ರೂ.8 ಲಕ್ಷ ಕೋಟಿ ಸಾಲವನ್ನು ಮರು ಪಾವತಿಸಲು ಬಳಸಲಾಗುತ್ತಿದೆಯೆಂದು ರಾಹುಲ್ ವಾಗ್ದಾಳಿ ನಡೆಸಿದ್ದಾರೆ.







