ಸಿಂಧೂ ಒಪ್ಪಂದ: ಭಾರತ, ಪಾಕಿಸ್ತಾನಗಳ ಪ್ರಕ್ರಿಯೆಗಳಿಗೆ ವಿಶ್ವಬ್ಯಾಂಕ್ ತಡೆ

ವಾಶಿಂಗ್ಟನ್, ಡಿ. 13: ಮಹತ್ವದ ಬೆಳವಣಿಗೆಯೊಂದರಲ್ಲಿ, ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದಡಿ ಭಾರತ ಮತ್ತು ಪಾಕಿಸ್ತಾನಗಳು ಆರಂಭಿಸಿರುವ ಎರಡು ಪ್ರತ್ಯೇಕ ಪ್ರಕ್ರಿಯೆಗಳಿಗೆ ವಿಶ್ವಬ್ಯಾಂಕ್ ತಡೆ ನೀಡಿದೆ. ತಮ್ಮ ಭಿನ್ನಾಭಿಪ್ರಾಯಗಳನ್ನು ನಿವಾರಿಸುವ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಲು ಉಭಯ ದೇಶಗಳಿಗೆ ಅನುವು ಮಾಡಿಕೊಡುವುದಕ್ಕಾಗಿ ವಿಶ್ವಬ್ಯಾಂಕ್ ಈ ಕ್ರಮ ತೆಗೆದುಕೊಂಡಿದೆ.
‘‘ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ರಕ್ಷಿಸಲು ಹಾಗೂ ಎರಡು ಜಲವಿದ್ಯುತ್ ಯೋಜನೆಗಳಿಗೆ ಸಂಬಂಧಿಸಿ ತಮ್ಮ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಳ್ಳುವ ಪರ್ಯಾಯ ವಿಧಾನಗಳನ್ನು ಕಂಡುಕೊಳ್ಳಲು ಭಾರತ ಮತ್ತು ಪಾಕಿಸ್ತಾನಗಳಿಗೆ ನೆರವಾಗಲು ನಾವು ಈ ತಡೆಯನ್ನು ಘೋಷಿಸಿದ್ದೇವೆ’’ ಎಂದು ವಿಶ್ವಬ್ಯಾಂಕ್ ಸಮೂಹದ ಅಧ್ಯಕ್ಷ ಜಿಮ್ ಯಾಂಗ್ ಕಿಮ್ ಹೇಳೀದರು.
ವಿಶ್ವಬ್ಯಾಂಕ್ ಅಧ್ಯಕ್ಷರು ಭಾರತ ಮತ್ತು ಪಾಕಿಸ್ತಾನಗಳ ಹಣಕಾಸು ಸಚಿವರುಗಳಿಗೆ ಪತ್ರಗಳನ್ನು ಬರೆದು ಈ ವಿಷಯವನ್ನು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ, ಪಂಚಾಯಿತಿ ನ್ಯಾಯಾಲಯಕ್ಕೆ ಅಧ್ಯಕ್ಷರ ನೇಮಕಾತಿಯನ್ನೂ ಬ್ಯಾಂಕ್ ಮುಂದೂಡಿದೆ. ವಿಶ್ವಬ್ಯಾಂಕ್‌ನ ಈ ಹಿಂದಿನ ಪ್ರಕಟನೆಯಂತೆ, ಡಿಸೆಂಬರ್ 12ರಂದು ಅದು ಅಧ್ಯಕ್ಷರನ್ನು ನೇಮಿಸುತ್ತದೆ ಎಂದು ನಿರೀಕ್ಷಿಸಲಾಗಿತ್ತು.
ಜಮ್ಮು ಮತ್ತು ಕಾಶ್ಮೀರದ ಕಿಶನ್‌ಗಂಗಾ ಮತ್ತು ರಟ್ಲೆ ಜಲವಿದ್ಯುತ್ ಯೋಜನೆಗಳ ವಿರುದ್ಧ ಪಾಕಿಸ್ತಾನ ಸಲ್ಲಿಸಿರುವ ದೂರಿನ ವಿಚಾರಣೆ ನಡೆಸಲು ಪಂಚಾಯಿತಿ ನ್ಯಾಯಾಲಯವನ್ನು ರಚಿಸುವ ಹಾಗೂ ತಟಸ್ಥ ಪರಿಣತರನ್ನು ನೇಮಿಸುವ ವಿಶ್ವಬ್ಯಾಂಕ್‌ನ ನಿರ್ಧಾರಕ್ಕೆ ಭಾರತ ಕಳೆದ ತಿಂಗಳು ಪ್ರಬಲ ವಿರೋಧ ವ್ಯಕ್ತಪಡಿಸಿತ್ತು.







