ವಿದ್ಯಾರ್ಥಿ ವೀಸಾ ಸಂಖ್ಯೆಯನ್ನು ಅರ್ಧಕ್ಕಿಳಿಸಲು ಬ್ರಿಟನ್ ನಿರ್ಧಾರ

ಲಂಡನ್, ಡಿ. 13: ವಿದ್ಯಾರ್ಥಿ ವೀಸಾಗಳ ಸಂಖ್ಯೆಯನ್ನು ಅರ್ಧಕ್ಕೆ ಇಳಿಸುವ ಯೋಜನೆಯನ್ನು ಅಂತಿಮಗೊಳಿಸುವ ಕಾರ್ಯದಲ್ಲಿ ಬ್ರಿಟನ್ ಸರಕಾರ ತೊಡಗಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.
ಈ ಯೋಜನೆಯ ಪ್ರಕಾರ, ವಿದ್ಯಾರ್ಥಿ ವೀಸಾಗಳ ಸಂಖ್ಯೆಯನ್ನು ಈಗಿನ 3,00,000ದಿಂದ 1,70,000ಕ್ಕೆ ಇಳಿಸಲಾಗುವುದು. ಭಾರತ ಸೇರಿದಂತೆ ಯುರೋಪ್‌ನ ಹೊರಗಿನಿಂದ ಬರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ತೀವ್ರ ಕುಸಿತ ಕಾಣಿಸಿಕೊಂಡಿರುವಂತೆಯೇ ಬ್ರಿಟನ್ ಈ ನಿರ್ಧಾರ ತೆಗೆದುಕೊಂಡಿದೆ.
ಬ್ರಿಟನ್‌ಗೆ ಬರುವ ವಲಸಿಗರ ಸಂಖ್ಯೆಯನ್ನು ಕಡಿತ ಮಾಡುವ ಉದ್ದೇಶದಿಂದ ಹಲವಾರು ಭಾರತೀಯ ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಕಾರಣಗಳಿಗಾಗಿ ವೀಸಾಗಳನ್ನು ನಿರಾಕರಿಸಲಾಗಿದೆ ಎಂಬುದಾಗಿ ಕೆಲವು ವಿಶ್ವವಿದ್ಯಾನಿಲಯಗಳ ಮುಖ್ಯಸ್ಥರು ಈಗಾಗಲೇ ದೂರಿದ್ದಾರೆ.
‘‘ಭಾರತದಲ್ಲೂ ಇದೇ ಗುಣಮಟ್ಟದ ಕೋರ್ಸ್‌ಗಳು ಲಭ್ಯವಿದೆ ಎಂಬುದಾಗಿ ಅವರು ಭಾರತೀಯ ವಿದ್ಯಾರ್ಥಿಗಳಿಗೆ ಹೇಳುತ್ತಿದ್ದಾರೆ. ಇದು ಉಡಾಫೆಯಾಗಿದೆ’’ ಎಂದು ಬ್ರಿಟನ್‌ನ ವಿಶ್ವವಿದ್ಯಾನಿಲಯವೊಂದರ ಉಪಕುಲಪತಿ ಹೇಳಿರುವುದಾಗಿ ‘ಗಾರ್ಡಿಯನ್’ ಪತ್ರಿಕೆ ವರದಿ ಮಾಡಿದೆ.





