ಅತ್ಯಾಚಾರದಿಂದ ಜನಿಸಿದ ಮಗುವಿಗೆ ಪರಿಹಾರದ ಹಕ್ಕು ಇದೆ: ಹೈಕೋರ್ಟ್

ಹೊಸದಿಲ್ಲಿ,ಡಿ.13: ಅತ್ಯಾಚಾರದಿಂದ ಜನಿಸಿದ ಮಗುವಿಗೆ ತನ್ನ ತಾಯಿ ಪಡೆದಿರುವ ಯಾವುದೇ ಪರಿಹಾರದ ಹೊರತಾಗಿ ಪ್ರತ್ಯೇಕ ಪರಿಹಾರ ಪಡೆಯುವ ಹಕ್ಕು ಇದೆ ಎಂದು ದಿಲ್ಲಿ ಉಚ್ಚ ನ್ಯಾಯಾಲಯವು ತೀರ್ಪು ನೀಡಿದೆ.
ವ್ಯಕ್ತಿಯೋರ್ವ ತನ್ನ 14ರ ಹರೆಯದ ಮಲಮಗಳ ಮೇಲೆ ಅತ್ಯಾಚಾರವೆಸಗಿ ಆಕೆ ಮಗುವಿಗೆ ಜನನ ನೀಡಲು ಕಾರಣನಾಗಿದ್ದ ಪ್ರಕರಣದಲ್ಲಿ ಆತ ಸಾಯುವವರೆಗೆ ಜೀವಾವಧಿ ಶಿಕ್ಷೆ ವಿಧಿಸಿದ ಸಂದರ್ಭ ನ್ಯಾಯಾಲಯವು ಪೊಸ್ಕೊ ಕಾಯ್ದೆ ಅಥವಾ ದಿಲ್ಲಿ ಸರಕಾರದ ಅತ್ಯಾಚಾರ ಸಂತ್ರಸ್ತೆ ಪರಿಹಾರ ಯೋಜನೆಯಡಿ ಅತ್ಯಾಚಾರದಿಂದ ಜನಿಸಿದ ಮಗುವಿಗೆ ಪರಿಹಾರವನ್ನು ನೀಡುವ ಉಲ್ಲೇಖವಿಲ್ಲದಿರುವುದನ್ನು ಪರಿಗಣಿಸಿ ಈ ಮಹತ್ವದ ತೀರ್ಪು ನೀಡಿದೆ.
ವ್ಯಂಗ್ಯವೆಂದರೆ ಸಂತ್ರಸ್ತೆಗೆ ಪರಿಹಾರಕ್ಕೆ ಸಂಬಂಧಿಸಿದಂತೆ ಈ ಹಿಂದೆ ಕಾನೂನೊಂದನ್ನು ರೂಪಿಸಿದ್ದ ಉಚ್ಚ ನ್ಯಾಯಾಲಯವು ವಿಚಾರಣಾ ನ್ಯಾಯಾಲಯವು ಆರೋಪಿಗೆ ವಿಧಿಸಿದ್ದ 15 ಲಕ್ಷ ರೂ.ದಂಡ ಪರಿಹಾರವನ್ನು 7.5 ಲ.ರೂ.ಗಳಿಗೆ ತಗ್ಗಿಸಿದೆ. ಹೆಚ್ಚಿನ ದಂಡ ಪರಿಹಾರ ವಿಧಿಸಿರುವುದು ದಿಲ್ಲಿ ಸರಕಾರವು 2011ರಲ್ಲಿ ರೂಪಿಸಿರುವ ಪರಿಹಾರ ಯೋಜನೆಯ ವಿರುದ್ಧವಾಗಿದೆ ಎಂದು ಅದು ಹೇಳಿದೆ.
ಆದರೆ,ಅಪ್ರಾಪ್ತ ವಯಸ್ಕ ಬಾಲಕಿ ಅಥವಾ ವಯಸ್ಕ ಮಹಿಳೆಯೇ ಇರಲಿ...ಅತ್ಯಾಚಾರ ಸಂತ್ರಸ್ತೆಗೆ ಜನಿಸಿದ ಮಗು ಅಪರಾಧಿಯ ಕೃತ್ಯದ ಬಲಿಪಶುವಾಗಿದೆ ಮತ್ತು ತನ್ನ ತಾಯಿಗೆ ದೊರೆತ ಪರಿಹಾರವನ್ನು ಹೊರತುಪಡಿಸಿ ಪ್ರತ್ಯೇಕ ಪರಿಹಾರ ಪಡೆಯುವ ಹಕ್ಕು ಹೊಂದಿದೆ ಎಂದು ನ್ಯಾಯಮೂರ್ತಿಗಳಾದ ಗೀತಾ ಮಿತ್ತಲ್ ಮತ್ತು ಆರ್.ಕೆ.ಗಾಬಾ ಅವರ ಪೀಠವು ಸ್ಪಷ್ಟಪಡಿಸಿದೆ.







