ಎಂಎಚ್370 ಶೋಧಕ್ಕಾಗಿ ಕೊನೆಯ ಬಾರಿಗೆ ಹೊರಟ ಹಡಗು

ಪರ್ತ್, ಡಿ. 13: ಎರಡೂವರೆ ವರ್ಷಗಳಿಗೂ ಹಿಂದೆ ನಿಗೂಢವಾಗಿ ನಾಪತ್ತೆಯಾಗಿರುವ ಮಲೇಶ್ಯನ್ ಏರ್‌ಲೈನ್ಸ್‌ನ ಎಂಎಚ್370 ವಿಮಾನದ ಶೋಧಕ್ಕಾಗಿ ಒಂಟಿ ಶೋಧ ಹಡಗೊಂದು ಆಸ್ಟ್ರೇಲಿಯದ ಫ್ರೆಮಾಂಟಲ್ ಬಂದರಿನಿಂದ ಸೋಮವಾರ ಹೊರಟಿದೆ.
ಬಹುಶಃ ಇದು ಅದರ ಕೊನೆಯ ಶೋಧ ಯಾನವಾಗಿರುತ್ತದೆ.
ಡಚ್ ಶೋಧ ಹಡಗು ಫುಗ್ರೊ ಇಕ್ವೇಟರ್ ಸೋಮವಾರ ರಾತ್ರಿ ಶೋಧ ಕಾರ್ಯಕ್ಕೆ ತೆರಳಿದೆ ಎಂದು ಮೂಲಸೌಕರ್ಯ ಮತ್ತು ಸಾರಿಗೆ ಸಚಿವ ಡ್ಯಾರನ್ ಚೆಸ್ಟರ್‌ರ ಕಚೇರಿ ಮಂಗಳವಾರ ತಿಳಿಸಿದೆ.
ಇದು ಎಂಎಚ್370 ವಿಮಾನಕ್ಕಾಗಿ ನಡೆಯುವ ಅಂತಿಮ ಶೋಧವೇ ಎನ್ನುವುದು ಹವಾಮಾನವನ್ನು ಅವಲಂಬಿಸಿದೆ ಎಂದು ಅವರ ಕಚೇರಿ ತಿಳಿಸಿದೆ.
ಚೀನಾದ ಹಡಗೊಂದು ಫೆಬ್ರವರಿಯಲ್ಲಿ ಶೋಧ ಕಾರ್ಯಾಚರಣೆಯಲ್ಲಿ ತೊಡಗಿತ್ತು. ಬೋಯಿಂಗ್ 777 ವಿಮಾನ ಪತನಗೊಂಡಿರಬಹುದು ಎಂಬುದಾಗಿ ಪರಿಣತರು ಭಾವಿಸಿರುವ 1,20,000 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಚೀನಾದ ಹಡಗು ಈ ತಿಂಗಳು ಶೋಧ ಕಾರ್ಯಾಚರಣೆಯಿಂದ ಹಿಂದೆ ಸರಿದಿದೆ.
2014 ಮಾರ್ಚ್ 8ರಂದು ರಾತ್ರಿ 239 ಮಂದಿಯನ್ನು ಹೊತ್ತು ಕೌಲಾಲಂಪುರದಿಂದ ಬೀಜಿಂಗ್‌ಗೆ ಹೋಗುತ್ತಿದ್ದ ಎಂಎಚ್370 ವಿಮಾನ ನಿಗೂಢವಾಗಿ ನಾಪತ್ತೆಯಾಗಿದೆ.







