ನಾಳೆಯಿಂದ ಮೂರು ದಿನಗಳ ಕಾಲ ಸಂಸತ್ತಿನಲ್ಲಿ ಪ್ರಧಾನಿ ಮೋದಿ ಉಪಸ್ಥಿತಿ

ಹೊಸದಿಲ್ಲಿ,ಡಿ.13: ಚಳಿಗಾಲದ ಅಧಿವೇಶನದ ಇನ್ನುಳಿದಿರುವ ಮೂರು ದಿನಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ಉಪಸ್ಥಿತರಿರುತ್ತಾರೆ ಎಂದು ಕೇಂದ್ರ ಸಚಿವ ಎಂ.ವೆಂಕಯ್ಯ ನಾಯ್ಡು ಅವರು ಇಂದಿಲ್ಲಿ ತಿಳಿಸಿದರು. ಸಂಸತ್ತಿನ ಉಭಯ ಸದನಗಳ ಕಲಾಪಗಳಿಗೆ ವ್ಯತ್ಯಯವನ್ನುಂಟು ಮಾಡಲು ಪ್ರತಿಪಕ್ಷವು ಆಗಾಗ್ಗೆ ತನ್ನ ನಿಲುವನ್ನು ಬದಲಿಸುತ್ತಿದೆ ಎಂದು ಅವರು ಆರೋಪಿಸಿದರು.
ಪ್ರಧಾನಿಗಳು ದಿಲ್ಲಿಯಿಂದ ಹೊರಗಿದ್ದ ಸಂದರ್ಭವನ್ನು ಹೊರತುಪಡಿಸಿದರೆ ಅವರು ಪ್ರತಿದಿನ ಸಂಸತ್ತಿನಲ್ಲಿರುತ್ತಾರೆ. ಎಲ್ಲರಿಗಿಂತ ಮೊದಲು ಸಂಸತ್ತಿಗೆ ಆಗಮಿಸುವ ಅವರು ಅಲ್ಲಿಂದ ಕೊನೆಯವರಾಗಿ ನಿರ್ಗಮಿಸುತ್ತಾರೆ. ಅವರು ತನ್ನ ಕೋಣೆಯಲ್ಲಿ ಕುಳಿತುಕೊಂಡೇ ಎಲ್ಲ ಬೆಳವಣಿಗೆಗಳನ್ನು ವೀಕ್ಷಿಸುತ್ತಿರುತ್ತಾರೆ. ಕೋರಿಕೆಯಿದ್ದಾಗ ಅವರು ಸದನಕ್ಕೆ ಆಗಮಿಸುತ್ತಾರೆ ಎಂದ ನಾಯ್ಡು, ಮುಂದಿನ ಮೂರುದಿನಗಳ ಕಾಲ ಪ್ರಧಾನಿ ಸಂಸತ್ತಿನಲ್ಲಿ ಉಪಸ್ಥಿತರಿರುತ್ತಾರೆಯೇ ಎಂಬ ಸುದ್ದಿಗಾರರ ನಿರ್ದಿಷ್ಟ ಪ್ರಶ್ನೆಗೆ ‘ಹೌದು’ ಎಂದು ಉತ್ತರಿಸಿದರು.
ನೋಟು ರದ್ದತಿ ಕುರಿತು, ಮತದಾನಕ್ಕೆ ಅವಕಾಶವಿರುವ ನಿಯಮದಡಿ ಚರ್ಚೆ ನಡೆಯಬೇಕು ಮತ್ತು ಆ ಸಂದರ್ಭ ಮೋದಿಯವರು ಸದನದಲ್ಲಿ ಉಪಸ್ಥಿತರಿರಬೇಕು ಎಂಬ ಪ್ರತಿಪಕ್ಷಗಳ ಆಗ್ರಹದ ಹಿನ್ನಲೆಯಲ್ಲಿ ನಾಯ್ಡು ಅವರ ಈ ಹೇಳಿಕೆ ಹೊರಗೆ ಬಿದ್ದಿದೆ.
ನ.16ರಂದು ಆರಂಭಗೊಂಡಾಗಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನವು ಈ ವರೆಗೆ ಹೆಚ್ಚುಕಡಿಮೆ ಯಾವುದೇ ಕಲಾಪಗಳನ್ನು ನಡೆಸಲು ಸಾಧ್ಯವಾಗದೆ ವ್ಯರ್ಥವಾ ಗಿದೆ. ಡಿ.14ರಿಂದ ಪುನರಾರಂಭಗೊಳ್ಳುವ ಅಧಿವೇಶನವು ಡಿ.16ರಂದು ಅಂತ್ಯಗೊಳ್ಳಲಿದೆ.
ನೋಟು ರದ್ದತಿ ಕುರಿತು ಚರ್ಚೆ ನಡೆಯಬೇಕೆಂದು ಸರಕಾರವು ಬಯಸುತ್ತಿದೆ ಎಂದು ಒತ್ತಿ ಹೇಳಿದ ನಾಯ್ಡು, ಪ್ರತಿಪಕ್ಷವು ಆಗಾಗ್ಗೆ ತನ್ನ ನಿಲುವನ್ನು ಬದಲಿಸುತ್ತಿದೆೆ. ನಿಯಮ 193ರಡಿ ಚರ್ಚೆಗೆ ಸ್ಪೀಕರ್ ಅನುಮತಿ ನೀಡಿದ್ದಾರೆ, ಆದರೆ ಈಗ ಪ್ರತಿಪಕ್ಷ ಮತ್ತೆ ಕಲಾಪಕ್ಕೆ ಅಡ್ಡಿಯನ್ನೊಡ್ಡುತ್ತಿದೆ. ಚರ್ಚೆ ಆರಂಭಗೊಂಡ ಬಳಿಕ ತನ್ನ ಬಳಿ ಯಾವುದೇ ಬಂಡವಾಳವಿಲ್ಲ ಎಂದು ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಕ್ಕೆ ಜ್ಞಾನೋದಯವಾಗಿದೆ. ಹೀಗಾಗಿ ಸದನದಲ್ಲಿ ಪ್ರಧಾನಿ ಉಪಸ್ಥಿತರಿರಬೇಕೆಂದು ಒತ್ತಾಯಿಸುತ್ತಿದೆ ಎಂದು ಛೇಡಿಸಿದರು.







