ಹವಾಲಾ ಆರೋಪಿಯ ಬಂಧನ: ರೂ. 5.70 ಕೋಟಿ ಹೊಸ ನೋಟು ವಶ

ಹೊಸದಿಲ್ಲಿ, ಡಿ.13: ಕರ್ನಾಟಕದ ಸ್ಥಳಗಳಿಂದ ರೂ. 2 ಸಾವಿರ ಮುಖ ಬೆಲೆಯ ರೂ.5.70 ಕೋಟಿ ಮೊತ್ತದ ನೋಟು ಮುಟ್ಟುಗೋಲಿಗೆ ಸಂಬಂಧಿಸಿ ಹವಾಲಾ ಆರೋಪಿ ಕೆ.ವಿ. ವೀರೇಂದ್ರ ಎಂಬಾತನನ್ನು ಮಂಗಳವಾರ ಸಿಬಿಐ ಬಂಧಿಸಿದೆ.
ಸಿಬಿಐ ಅಧಿಕಾರಿಗಳು ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾ, ಸ್ಟೇಟ್‌ಬ್ಯಾಂಕ್ ಆಫ್ ಮೈಸೂರು, ಐಸಿಐಸಿಐ ಬ್ಯಾಂಕ್ ಹಾಗೂ ಕೋಟಕ್ ಮಹೀಂದ್ರ ಬ್ಯಾಂಕ್‌ಗಳ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದೆಯೆಂದು ತನಿಖೆ ಸಂಸ್ಥೆಯ ಮೂಲಗಳು ತಿಳಿಸಿವೆ.
ವೀರೇಂದ್ರನನ್ನು ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಅದು ಆತನಿಗೆ 6 ದಿನಗಳ ಸಿಬಿಐ ಕಸ್ಟಡಿಯನ್ನು ವಿಧಿಸಿದೆ.
ಪ್ರಾಥಮಿಕ ತನಿಖೆಯ ವೇಳೆ ವೀರೇಂದ್ರ ಹಲವರ ಹೆಸರುಗಳನ್ನು ಹೇಳಿದ್ದಾನೆ. ಅವರೊಂದಿಗೆ ಆತನಿಗಿರುವ ಸಂಬಂಧದ ಬಗ್ಗೆ ಖಚಿತ ಪುರಾವೆಗಳನ್ನು ಸಂಗ್ರಹಿಸಲು ಸಿಬಿಐ ಪ್ರಯತ್ನಿಸುತ್ತಿದೆಯೆಂದು ಮೂಲಗಳು ಹೇಳಿವೆ.
6 ದಿನಗಳ ವಿಚಾರಣೆಯ ವೇಳೆ ಸಿಬಿಐ, ಆತನ ಆವರಣಗಳಿಂದ ವಶಪಡಿಸಿಕೊಂಡಿರುವ ದಾಖಲೆಗಳೊಂದಿಗೆ ವೀರೇಂದ್ರನನ್ನು ಪ್ರಶ್ನಿಸಲಿದೆ. ಪ್ರಕರಣದಲ್ಲಿ ಹಿರಿಯ ಬ್ಯಾಂಕ್ ಅಧಿಕಾರಿಗಳ ಪಾತ್ರವನ್ನು ಬಹಿರಂಗಪಡಿಸಲು, ಹಣದ ಮೂಲದ ಬಗ್ಗೆ ಮಾಹಿತಿ ಸಂಗ್ರಹಿಸಲು ಅದು ಪ್ರಯತ್ನಿಸಲಿದೆಯೆಂದು ಅವು ತಿಳಿಸಿವೆ.







