ರಂಗಭೂಮಿ ಸಮಾಜಮುಖಿ ಚಿಂತನೆ ಸೃಷ್ಟಿಸುವ ಶಾಲೆ: ಚೌಟ

ಉಡುಪಿ, ಡಿ.13: ಉತ್ತಮ ಶಾಲೆಯಾಗಿರುವ ರಂಗಭೂಮಿಯು ಸಮಾಜಮುಖಿ ಚಿಂತನೆಗಳನ್ನು ಹುಟ್ಟುಹಾಕುತ್ತದೆ. ಇದರಲ್ಲಿ ತೊಡಗಿಸಿ ಕೊಂಡು ಕಲಿತವರು ಜೀವನದಲ್ಲಿ ಸಂತೃಪ್ತರಾಗಿದ್ದಾರೆ ಎಂದು ಹಿರಿಯ ಸಾಹಿತಿ, ರಂಗಕರ್ಮಿ ಡಾ.ಡಿ.ಕೆ.ಚೌಟ ಹೇಳಿದ್ದಾರೆ.
ಉಡುಪಿ ರಂಗಭೂಮಿ ವತಿಯಿಂದ ಮಂಗಳವಾರ ಎಂಜಿಎಂ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿರುವ ಐದು ದಿನಗಳ ಸುವರ್ಣ ರಂಗಭೂಮಿ ಸಂಭ್ರಮ ಸಮರೋಪ ಸಮಾರಂಭದಲ್ಲಿ ಮಂಗಳವಾರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಆಕಾಶವಾಣಿ ರಂಗಕರ್ಮಿ ಡಾ.ಶರಭೇಂದ್ರ ಸ್ವಾಮಿ ಮಾತನಾಡಿದರು. ದಿ.ಡಾ.ಬಿ.ಬಿ.ಶೆಟ್ಟಿ ಮತ್ತು ದಿ.ಡಯಾನ ಮೋಹನ್‌ದಾಸ್ ಪೈ ಅವರ ಸಂಸ್ಮರಣೆಯನ್ನು ಯಕ್ಷಗಾನ ಕಲಾರಂಗದ ಉಪಾಧ್ಯಕ್ಷ ಎಸ್.ವಿ.ಭಟ್ ನೆರ ವೇರಿಸಿದರು. ಉದ್ಯಮಿಗಳಾದ ರವೀಂದ್ರ ಪೂಜಾರಿ, ಕೆ.ಗೋಪಾಲ್ ಮುಖ್ಯ ಅತಿಥಿಗಳಾಗಿದ್ದರು.
ರಂಗಭೂಮಿ ಗೌರವಾಧ್ಯಕ್ಷ ಡಾ.ಎಚ್.ಶಾಂತರಾಮ್, ಉಪಾಧ್ಯಕ್ಷ ವಾಸುದೇವ್ ರಾವ್, ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ, ಸುವರ್ಣ ರಂಗಭೂಮಿ ಕಾರ್ಯಾಧ್ಯಕ್ಷ ಡಾ.ಅರವಿಂದ ನಾಯಕ್ ಅಮ್ಮುಂಜೆ ಉಪಸ್ಥಿತರಿದ್ದರು. ಕಾರ್ಯದರ್ಶಿ ರವಿರಾಜ್ ಎಚ್.ಪಿ. ಸ್ವಾಗತಿಸಿದರು. ಬಳಿಕ ನಟನಾ ಮೈಸೂರು ತಂಡದಿಂದ ಮಂಡ್ಯ ರಮೇಶ್ ನಿರ್ದೇಶನದ ‘ಚಾಮ ಚಲುವೆ’ ನಾಟಕ ಪ್ರದರ್ಶನ ಗೊಂಡಿತು.





