ನೋಟು ರದ್ದತಿ: ಡಿ.29ರಂದು ಕೇರಳದಲ್ಲಿ ಎಲ್‌ಡಿಎಫ್‌ನಿಂದ ಮಾನವ ಸರಪಳಿ ಪ್ರತಿಭಟನೆ

ತಿರುವನಂತಪುರ, ಡಿ.13: ನೋಟು ರದ್ದತಿ ಯೋಜನೆಯಿಂದ ಜನರು ಎದುರಿಸುತ್ತಿರುವ ಕಷ್ಟದ ವಿರುದ್ಧ ಪ್ರತಿಭಟನೆಯನ್ನು ತೀವ್ರಗೊಳಿಸಲು ಕೇರಳದ ಸಿಪಿಎಂ ನೇತೃತ್ವದ ಎಲ್‌ಡಿಎಫ್ ನಿರ್ಧರಿಸಿದೆ. ಈ ಸಂಬಂಧ ಅದು ಡಿ.29ರಂದು ರಾಜ್ಯಾದ್ಯಂತ ಮಾನವ ಸರಪಳಿಯೊಂದನ್ನು ಸಂಘಟಿಸಲಿದೆ.
ಉತ್ತರದ ಕಾಸರಗೋಡು ಜಿಲ್ಲೆಯಿಂದ ದಕ್ಷಿಣದ ರಾಜಧಾನಿ ತಿರುವನಂತಪುರದ ವರೆಗೆ ಮಾನವ ಸರಪಳಿ ರಚಿಸಲಾಗುವುದೆಂದು ಎಲ್‌ಡಿಎಫ್ ಸಂಚಾಲಕ ವೈಕಂ ವಿಶ್ವನ್ ತಿಳಿಸಿದ್ದಾರೆ.
ಕೇವಲ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರು ಮಾತ್ರವಲ್ಲದೆ, ಈ ವಿಷಯದಲ್ಲಿ ಸಮಾನ ಭಾವನೆ ಹಂಚಿಕೊಳ್ಳುವ ಪ್ರತಿಯೊಬ್ಬನೂ ಮಾನವ ಸರಪಳಿ ಪ್ರತಿಭಟನೆಯಲ್ಲಿ ಭಾಗವಹಿಸಬಹುದೆಂದು ಅವರು ಹೇಳಿದ್ದಾರೆ.
ಮಾನವ ಸರಪಳಿ ಸಂಘಟಿಸುವ ಮೊದಲು ಎಡ ರಂಗವು ಡಿ.20ರಂದು ರಾಜ್ಯದ ಎಲ್ಲ ಪಂಚಾಯತ್‌ಗಳಲ್ಲಿ ಸಮಾವೇಶಗಳನ್ನು ನಡೆಸಲಿದೆ ಹಾಗೂ ಡಿ.22ರಂದು ‘ಪಾದಯಾತ್ರೆ’ ಗಳನ್ನು ನಡೆಸಲಿವೆ. ನೋಟು ರದ್ದತಿಯ ದುಷ್ಪರಿಣಾಮದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆಯೆಂದು ವೈಕಂ ತಿಳಿಸಿದ್ದಾರೆ.
ಈ ಸಂಬಂಧ ಡಿ.27 ಹಾಗೂ 28ರಂದು ಪಕ್ಷದ ಕಾರ್ಯಕರ್ತರು ಬೂತ್‌ಮಟ್ಟದಲ್ಲಿ ಮನೆ-ಮನೆ ಭೇಟಿಯನ್ನು ನಡೆಸಲಿದ್ದಾರೆಂದೂ ಅವರು ಹೇಳಿದ್ದಾರೆ.







