ಬೆಂಕಿ ಅವಘಡಕ್ಕೆ ಅಂಗಡಿಗಳು ಭಸ್ಮ
5 ಲಕ್ಷ ರೂ. ನಷ್ಟ,

ಕಡೂರು, ಡಿ.13: ಶಾರ್ಟ್ ಸಕ್ಯೂಟ್‌ನಿಂದಾಗಿ ಅಂಗಡಿಗಳು ಸುಟ್ಟು ಭಸ್ಮವಾಗಿ ಅಪಾರ ನಷ್ಟ ಸಂಭವಿಸಿರುವ ಘಟನೆ ಪಟ್ಟಣದ ಸಂಗೊಳ್ಳಿರಾಯಣ್ಣ ವೇದಿಕೆಯ ಮುಂಭಾಗದಲ್ಲಿ ನಡೆದಿದೆ.
ಪಟ್ಟಣದ ಸ್ಥಳೀಯ ನಿವಾಸಿ ಸಿ.ಎಚ್. ಜಾಫರ್ ಮೊಯ್ದಿನ್ ಎಂಬವರಿಗೆ ಸೇರಿದ್ದ ರಾಯಲ್ ಕೂಲ್ ಡ್ರಿಂಕ್ಸ್ ಅಂಗಡಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಬಿದ್ದು ಇಡೀ ಅಂಗಡಿ ಭಸ್ಮವಾಗಿದೆ. ಘಟನೆಯಿಂದ ಸುಮಾರು 2.50 ಲಕ್ಷ ರೂ. ವೌಲ್ಯದ ಯಂತ್ರೋಪಕರಣಗಳು ಸುಟ್ಟು ಕರಕಲಾಗಿವೆ.
ಅಲ್ಲದೆ, ಈ ಅಂಗಡಿಯ ಪಕ್ಕದಲ್ಲಿದ್ದ ನಂಜುಂಡಪ್ಪ ಎಂಬವರಿಗೆ ಸೇರಿದ ಅಂಗಡಿಗೂ ಬೆಂಕಿ ಆವರಿಸಿ ಆ ಅಂಗಡಿಯೂ ಸಂಪೂರ್ಣವಾಗಿ ಸುಟ್ಟು ಹೋಗಿ ಸುಮಾರು ಎರಡೂವರೆ ಲಕ್ಷ ರೂ. ವೌಲ್ಯದ ಸಾಮಾನುಗಳು ಸುಟ್ಟು ಹೋಗಿವೆ. ಸ್ಥಳೀಯರು ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ತಿಳಿಸಿದ ಕಾರಣ ಪಕ್ಕದಲ್ಲಿದ್ದ ಸುಮಾರು 10 ಅಂಗಡಿಗಳನ್ನು ಬೆಂಕಿಯ ಕೆನ್ನಾಲಿಗೆಯಿಂದ ರಕ್ಷಿಸಲಾಗಿದೆ.
ಈ ಸ್ಥಳದಲ್ಲಿ ಸೋಮವಾರ ಹೊರತುಪಡಿಸಿ, ಸೊಪ್ಪುಮಾರುವ ವ್ಯಾಪಾರಸ್ಥರು ಪ್ರತಿ ದಿನ ನೂರಾರು ಸಂಖ್ಯೆಯಲ್ಲಿ ಮಧ್ಯರಾತ್ರಿ 2.30ರಿಂದಲೇ ಸೇರುತ್ತಾರೆ. ಬೆಂಕಿ ಅವಘಡ ಸಂಭವಿಸಿದಾಗ ಯಾರೊಬ್ಬರೂ ಇರಲಿಲ್ಲ ಎಂದು ತಿಳಿದು ಬಂದಿದೆ. ಈ ಸಂಬಂಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಡೂರು ಪಟ್ಟಣದಾದ್ಯಂತ ಎಲ್ಲೆಂದರಲ್ಲಿ ಪೆಟ್ಟಿಗೆ ಅಂಗಡಿಗಳು ನಾಯಿಕೊಡೆಗಳಂತೆ ತಲೆಎತ್ತುತ್ತಿವೆ. ಸಂಬಂಧಿಸಿದ ಪುರಸಭೆ ಅಧಿಕಾರಿಗಳು ಗಮನಹರಿಸುವ ಗೋಜಿಗೇ ಹೋಗುತ್ತಿಲ್ಲ. ಇತ್ತ ಮೆಸ್ಕಾಂ ಇಲಾಖೆಯವರೂ ಪೆಟ್ಟಿಗೆ ಅಂಗಡಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುತ್ತಿದ್ದಾರೆ. ಮುಂದಾದರೂ ಪುರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ಅನಧಿಕೃತ ಪೆಟ್ಟಿಗೆ ಅಂಗಡಿಗಳ ತೆರವು ಕಾರ್ಯ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.







