ಮನಪಾ ಮೇಯರ್‌ರಿಂದಲೇ ಆಸ್ತಿ ತೆರಿಗೆ ಬಾಕಿ
ಶಿವಮೊಗ್ಗ ನಾ.ಹಿ.ವೇ. ಒಕ್ಕೂಟ ಆರೋಪ
3-4 ವರ್ಷಗಳಿಂದ ತೆರಿಗೆ ಬಾಕಿ
ಮೇಯರ್ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ
ಶಿವಮೊಗ್ಗ, ಡಿ. 13: ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಎಸ್.ಕೆ.ಮರಿಯಪ್ಪ ಅವರು ಕಳೆದ ಕೆಲ ವರ್ಷಗಳಿಂದ ತಮ್ಮ ಒಡೆತನಕ್ಕೆ ಸೇರಿದ ಎರಡು ಸ್ಥಿರಾಸ್ತಿಗಳಿಗೆ ಸಂಬಂಧಿಸಿದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಆರೋಪ ಕೇಳಿಬಂದಿದೆ. ಇದು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೀಡು ಮಾಡಿದೆ. ಈ ಬಗ್ಗೆ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ ಜಿಲ್ಲಾಧಿಕಾರಿಯವರಿಗೆ ದೂರು ಸಲ್ಲಿಸಿದ್ದು, ಮೇಯರ್ ಎಸ್.ಕೆ. ಮರಿಯಪ್ಪಅವರು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಕುರಿತಂತೆ ಉನ್ನತ ಮಟ್ಟದ ತನಿಖೆ ನಡೆಸಬೇಕು. ಬಾಕಿ ಸಾಬೀತಾದರೆ ಅವರ ವಿರುದ್ಧ ಕಾನೂನು ರೀತಿಯ ಕ್ರಮ ಜರಗಿಸಬೇಕು ಎಂದು ಆಗ್ರಹಿಸಿದೆ.
ಆರೋಪವೇನು?: ಎಸ್.ಕೆ.ಮರಿಯಪ್ಪಅವರು 29ನೆ ವಾರ್ಡ್‌ನಲ್ಲಿ ಹೊಂದಿರುವ ಎರಡು ಸ್ಥಿರಾಸ್ತಿಗಳಿಗೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಪಾಲಿಕೆಗೆ ಆಸ್ತಿ ತೆರಿಗೆ ಪಾವತಿಸಿಲ್ಲ ಎಂದು ಪಾಲಿಕೆಯ ಕಂಪ್ಯೂಟರ್ ದಾಖಲೆಗಳಿಂದ ತಿಳಿದುಬರುತ್ತದೆ ಎಂದು ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ ಗಂಭೀರ ಆರೋಪ ಮಾಡಿದೆ.
ದುರ್ಗಿಗುಡಿ ಮುಖ್ಯ ರಸ್ತೆಯ ಲ್ಲಿರುವ ಆಸ್ತಿ ಸಂಖ್ಯೆ 598/749/1ಕ್ಕೆ 2010-11 ರಿಂದ ಮತ್ತು ಅದೇ ರಸ್ತೆಯ ದುರ್ಗಮ್ಮನ ಕೇರಿಯಲ್ಲಿರುವ ಆಸ್ತಿ ಸಂಖ್ಯೆ 593/747/1ಕ್ಕೆ 2013-14 ರಿಂದಲೂ ತೆರಿಗೆ ಕಟ್ಟಿಲ್ಲ ಎಂದು ಕಂಪ್ಯೂಟರ್ ದಾಖಲೆಗಳಿಂದ ತಿಳಿದು ಬರುತ್ತದೆ ಎಂದು ಒಕ್ಕೂಟ ಆಪಾದಿಸಿದೆ. ಎಸ್.ಕೆ.ಮರಿಯಪ್ಪಅವರು ನಗರದ ಪ್ರಥಮ ಪ್ರಜೆಯಾಗಿರುವುದರಿಂದ ಆಸ್ತಿ ತೆರಿಗೆ ಪಾವತಿಸದ ಆರೋಪಕ್ಕೆ ಸಂಬಂಧಿಸಿದ ತನಿಖೆಯನ್ನು ನಿಷ್ಪಕ್ಷಪಾತವಾಗಿ, ಪಾರದರ್ಶಕವಾಗಿ ನಡೆಸಬೇಕು.
ಹಾಗೆಯೇ ತೆರಿಗೆ ಪಾವತಿಯು ಕಟ್ಟಡದ ವಾಸ್ತವದಲ್ಲಿರುವ ಉದ್ದ -ಅಗಲಗಳಿಗೆ ಅನುಗುಣವಾಗಿ ನಿಗದಿಯಾಗಿದೆಯೇ? ಎಂಬುದರ ಬಗ್ಗೆಯೂ ಪರಿಶೀಲಿಸಬೇಕು ಎಂದು ಒಕ್ಕೂಟ ಜಿಲ್ಲಾಧಿಕಾರಿಯವರಲ್ಲಿ ಆಗ್ರಹಿಸಿದೆ.
ಒಂದು ವೇಳೆ ಎಸ್.ಕೆ.ಮರಿಯಪ್ಪಅವರು ಸಮರ್ಪಕವಾಗಿ ಆಸ್ತಿ ತೆರಿಗೆ ಪಾವತಿಸದಿರುವುದು ಕಂಡುಬಂದರೆ ಅವರ ಪಾಲಿಕೆ ಸದಸ್ಯತ್ವ ರದ್ದುಗೊಳಿಸಿ, ಕಾನೂನು ರೀತಿಯ ಕ್ರಮಕೈಗೊಳ್ಳಬೇಕು ಎಂದು ಒಕ್ಕೂಟವು ಜಿಲ್ಲಾಡಳಿತವನ್ನು ಆಗ್ರಹಿಸಿದೆ.







