ಲಕ್ಕವಳ್ಳಿ: 84ಲಕ್ಷ ರೂ. ವೆಚ್ಚದ ಕಾಮಗಾರಿಗಳಿಗೆ ಶಾಸಕ ಶ್ರೀನಿವಾಸ್ ಚಾಲನೆ

ತರೀಕೆರೆ,ಡಿ.13: ಲಕ್ಕವಳ್ಳಿ ಹೋಬಳಿಯ ವಿವಿಧ ಭಾಗಗಳಲ್ಲಿ 84ಲಕ್ಷ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಾಸಕ ಜಿ.ಎಚ್. ಶ್ರೀನಿವಾಸ್ ಮಂಗಳವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಲೋಕೋಪ ಯೋಗಿ ಇಲಾಖೆಯಿಂದ 3.49 ಕೋಟಿ ರೂ., ನೀರಾವರಿ ಇಲಾಖೆಯ 3 ಕೋಟಿ ರೂ., ಭದ್ರಾ ಮೇಲ್ದಂಡೆ ಯೋಜನೆಯ 3ಕೋಟಿ ರೂ. ಒಟ್ಟು 10ಕೋಟಿ ರೂ. ಅನುದಾನವನ್ನು ಲಕ್ಕವಳ್ಳಿ ಹೋಬಳಿಯ ಪ.ಜಾತಿ ಮತ್ತು ಪ.ಪಂಗಡಗಳ ಕಾಲನಿಗಳಲ್ಲಿ ಮೂಲಭೂತ ಸೌಕರ್ಯಕ್ಕೆ ಬಳಸಲಾಗುವುದು ಎಂದರು.
ತನ್ನ ಅವಧಿಯಲ್ಲಿ ಕುಗ್ರಾಮಗಳಿಗೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದೇನೆ.
ದಲಿತ ಕಾಲನಿಗಳಿಗೆ ಹೆಚ್ಚು ಪ್ರಾತಿನಿಧ್ಯ ನೀಡಿದ್ದು ಮುಂದಿನ ದಿನಗಳಲ್ಲಿ ಎಲ್ಲಾ ದಲಿತ ಕಾಲನಿಗಳು ರಸ್ತೆ, ಚರಂಡಿ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕಾಣಲಿವೆ. ಬಗರ್‌ಹುಕುಂ ಸಾಗುವಳಿ ಚೀಟಿ ವಿತರಿಸಲು ಆಡಳಿತಾತ್ಮಕ ಸಮಸ್ಯೆಗಳು ಎದುರಾಗಿದ್ದು, ಅಧಿಕಾರಿಗಳ ಜೊತೆ ಚರ್ಚಿಸಿ ಶೀಘ್ರ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಜಿ.ಪಂ. ಅಧ್ಯಕ್ಷ ವಿಶ್ವನಾಥ್, ಮಾಜಿ ಸದಸ್ಯ ಕೆ.ಪಿ. ಕುಮಾರ್, ತಾ.ಪಂ.ಸದಸ್ಯ ರಾಮಪ್ಪ, ಮಂಜುಳಾಬಾಯಿ, ಲಕ್ಕವಳ್ಳಿ ಗ್ರಾ.ಪಂ.ಅಧ್ಯಕ್ಷ ಶಿವಕಿರಣ್, ಬಾವಿಕೆರೆ ಗ್ರಾ.ಪಂ.ಉಪಾಧ್ಯಕ್ಷೆ ಜಯಂತಿ, ಕರಕುಚ್ಚಿ ಗ್ರಾ.ಪಂ. ಅಧ್ಯಕ್ಷ ವಿಜಯಬಾಯಿ, ಗುತ್ತಿಗೆದಾರ ರವಿಕಿಶೋರ್, ಮುಖಂಡರಾದ ರಾಜರಾವ್, ಮಂಜುನಾಥ್, ಅಮ್ಜದ್, ಎಇಇ ಧನಂಜಯ ಮೂರ್ತಿ, ಜೆಇ ಕಲ್ಲೇಶಪ್ಪ, ಪಿಡಿಒ ಪಾಂಡುರಂಗ ಮತ್ತಿತರರಿದ್ದರು.







