‘ಇಸ್ಲಾಮ್ ಧರ್ಮಕ್ಕೆ ನೈತಿಕ ಶಕ್ತಿ ತುಂಬುವ ಕೆಲಸ ಮಾಡಬೇಕು’
ಮೂಡಿಗೆರೆ, ಡಿ.13: ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜೀವನ ಶೈಲಿಯು ವಿಭಿನ್ನತೆಯಿಂದ ಕೂಡಿದ್ದು, ಅವರನ್ನು ನೆನೆಪಿಸಿಕೊಳ್ಳುವ ಮೂಲಕ ಇಸ್ಲಾಮ್ ಧರ್ಮಕ್ಕೆ ನೈತಿಕ ಶಕ್ತಿ ತುಂಬುವ ಕೆಲಸ ಮಾಡಬೇಕಿದೆ ಎಂದು ಬದ್ರಿಯಾ ಜುಮ್ಮಾ ಮಸೀದಿ ಖತೀಬ್ ಯಾಕೂಬ್ ದಾರಿಮಿ ಹೇಳಿದರು.
ಅವರು ಬದ್ರಿಯಾ ಮಸೀದಿಯಲ್ಲಿ ನಡೆದ ಮೀಲಾದುನ್ನಬಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಸ್ಲಾಮ್ ಧರ್ಮವನ್ನು ಸ್ಥಾಪಿಸಿ ಜಗತ್ತಿಗೆ ಧರ್ಮವನ್ನು ಸಾರಲು ಪ್ರವಾದಿ ಮುಹಮ್ಮದ್ ತನ್ನ ದೂತನನ್ನಾಗಿ ಕಳಿಸಿ 1,439 ವರ್ಷಗಳಾಯಿತು. ಪ್ರವಾದಿ ಈ ಭೂಮಿ ಅಂತ್ಯವಾಗುವವರೆಗೆ ನಡೆ, ನುಡಿ, ಆಚಾರ, ವಿಚಾರಗಳನ್ನು ಹಾಗೂ ಬದುಕಿನ ದಾರಿಯನ್ನು ತಿಳಿಸಿ ವಿಶ್ರಮಿಸುತ್ತಿದ್ದಾರೆ ಎಂದು ನುಡಿದರು.
ಇದಕ್ಕೂ ಮುನ್ನ ಮೂರು ದಿನಗಳ ಕಾಲ ಧಾರ್ಮಿಕ ಮತ ಪ್ರಭಾಷಣ ನಡೆಸಲಾಗಿತ್ತು. ಕೊನೆಯಲ್ಲಿ ಅರೆಬಿಕ್ ಪಾಠಶಾಲೆ ಮಲ್ಲಖಿಗೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಧಾರ್ಮಿಕ ಪಠಣಗಳು ನಡೆದವು. ವಿಜೇತ ವಿದ್ಯಾರ್ಥಿಗಳಿಗೆ ಆಕರ್ಷಕ ಬಹುಮಾನ ನೀಡಿ ಪುರಸ್ಕರಿಸಲಾಯಿತು. ಬದ್ರಿಯಾ ಮಸೀದಿ ಅಧ್ಯಕ್ಷ ಎಂ.ಎ.ಹಮ್ಮಬ್ಬ ಅಧ್ಯಕ್ಷತೆ ವಹಿಸಿದ್ದರು.





