ಲೋಧಾ ಸಮಿತಿಯ ಶಿಫಾರಸು ಪುನರ್ ಪರಿಶೀಲನಾ ಅರ್ಜಿ ತಿರಸ್ಕರಿಸಿದ ಸುಪ್ರೀಂ

ಹೊಸದಿಲ್ಲಿ, ಡಿ.13: ಕ್ರಿಕೆಟ್ ಆಡಳಿತದಲ್ಲಿ ಸುಧಾರಣೆಗೆ ಸಂಬಂಧಿಸಿ ಲೋಧಾ ಸಮಿತಿಯು ಸಲ್ಲಿಸಿರುವ ವರದಿಯಲ್ಲಿನ ಶಿಫಾರಸುಗಳ ಪುನರ್ ಪರಿಶೀಲನೆಗೆ ಬಿಸಿಸಿಐ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ತಿರಸ್ಕರಿಸಿದೆ.
ಲೋಧಾ ಸಮಿತಿಯು ಕ್ರಿಕೆಟ್ ಆಡಳಿತದಿಂದ ಸಚಿವರು ಮತ್ತು ಅಧಿಕಾರಿಗಳನ್ನು ದೂರ ಇಡುವಂತೆ ಮತ್ತು 70 ವರ್ಷ ದಾಟಿದವರಿಗೆ ಪದಾಧಿಕಾರಿಯಾಗಲು ಅವಕಾಶವಿಲ್ಲವೆಂದು ಲೋಧಾ ಸಮಿತಿಯು ಶಿಫಾರಸು ಮಾಡಿತ್ತು.
ಸುಪ್ರೀಂ ಕೋರ್ಟ್ ಜುಲೈ 18ರಂದು ಲೋಧಾ ಸಮಿತಿಯು ಸಲ್ಲಿಸಿರುವ ವರದಿಯ ಶಿಫಾರಸುಗಳನ್ನು ಅಂಗೀಕರಿಸಿತ್ತು. ಬಿಸಿಸಿಐಗೆ ಆರು ತಿಂಗಳ ಒಳಗಾಗಿ ಸಮಿತಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸುವಂತೆ ಸೂಚಿಸಿತ್ತು.
ಒಂದು ರಾಜ್ಯಕ್ಕೆ ಒಂದು ಮತ ಚಲಾಯಿಸುವ ಅವಕಾಶ, ಆಡಳಿತ ಸಮಿತಿಯಲ್ಲಿ ಮೂರು ವರ್ಷ ಸೇವೆ ಸಲ್ಲಿಸಲು ಅವಕಾಶ, ಸತತವಾಗಿ ಆಡಳಿತ ಸಮಿತಿಯಲ್ಲಿ ಅಧಿಕಾರದಲ್ಲಿರಲು ಅವಕಾಶವಿಲ್ಲ, ಮೂರು ವರ್ಷಗಳ ಅವಧಿ ಮುಗಿದ ಬಳಿಕ ಸ್ವಲ್ಪ ಸಮಯ ವಿರಾಮವಿರಬೇಕು, ಗರಿಷ್ಠ ಮೂರು ಅವಧಿಗಳ ತನಕ ಆಡಳಿತ ಮಂಡಳಿಯಲ್ಲಿರಲು ಅವಕಾಶ ಈ ಶಿಫಾರಸುಗಳು ದಶಕದಿಂದಲೂ ಬಿಸಿಸಿಐನ ಆಡಳಿತದಲ್ಲಿ ಅಂಟಿಕೊಂಡವರಿಗೆ ಆಘಾತ ನೀಡಿದೆ.ಹಲವು ದಶಕಗಳಿಂದಲೂ ಆಡಳಿತದಲ್ಲಿ ಅಂಟಿಕೊಂಡವರ ಅಧಿಕಾರದ ಅವಧಿ ಕೊನೆಗೊಳ್ಳುವ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಶಿಫಾರಸುಗಳ ಪುನರ್ ಪರಿಶೀಲನೆಗೆ ಬಿಸಿಸಿಐ ಸುಪ್ರೀಂ ಕೊರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.
ಬಿಸಿಸಿಐ ಮತ್ತು ವಿವಿಧ ರಾಜ್ಯಗಳ ಕ್ರಿಕೆಟ್ ಸಂಸ್ಥೆಗಳ ಲೋಧಾ ಸಮಿತಿಯ ಶಿಫಾರಸುಗಳ ಪುನರ್ ಪರಿಶೀಲನೆಗೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಮತ್ತು ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ನೇತೃತ್ವದ ನ್ಯಾಯಪೀಠ ಈ ಸಂಬಂಧ ನ.18ರಂದು ಆದೇಶ ನೀಡಿದ್ದರೂ, ಸುಪ್ರೀಂ ಕೋರ್ಟ್‌ನ ಜಾಲತಾಣದಲ್ಲಿ ಮಂಗಳವಾರ ಅಪ್‌ಲೋಡ್ ಆಗಿದೆ.







