ಕ್ರೈಮ್ ಪ್ಯಾಟ್ರೋಲ್ ನಟ ಕಮಲೇಶ್ ಪಾಂಡೆ ದುರಂತ ಅಂತ್ಯ

ಜಬಲ್ಪುರ,ಡಿ.13: ಟಿವಿ ಧಾರಾವಾಹಿಗಳ ನಟ,ಸೋನಿ ಟಿವಿಯಲ್ಲಿ ಪ್ರಸಾರಗೊಳ್ಳುವ ಕ್ರೈಂ ಪೆಟ್ರೋಲ್ ಧಾರಾವಾಹಿಯಲ್ಲಿ ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸಿದ್ದ ಕಮಲೇಶ್ ಪಾಂಡೆ ಅವರು ಇಂದು ಮಧ್ಯಪ್ರದೇಶದ ಜಬಲ್ಪುರದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.
ಪಾಂಡೆ ಆತ್ಮಹತ್ಯೆಗೆ ಶರಣಾದ ಸಂದರ್ಭದಲ್ಲಿ ಸಂಜೀವಿನಿ ನಗರದಲ್ಲಿದ್ದರು ಮತ್ತು ಅವರ ಪತ್ನಿಯ ಸೋದರಿ ಅಂಜನಿ ಚತುರ್ವೇದಿ ಉಪಸ್ಥಿತರಿದ್ದರು. ಕೆಲವು ದಿನಗಳ ಹಿಂದೆ ಅಂಜನಿ ತನ್ನ ಹಿರಿಯ ಪುತ್ರಿಯ ಮದುವೆಯನ್ನು ನೆರವೇರಿಸಿದ್ದು, ಪಾಂಡೆಯವರನ್ನು ಆಹ್ವಾನಿಸಿರಲಿಲ್ಲ. ಇದರಿಂದ ಪಾಂಡೆ ಅಸಮಾಧಾನಗೊಂಡಿದ್ದರು ಎನ್ನಲಾಗಿದೆ. ಕುಡಿದು ತುಂಬ ಗಲಾಟೆ ಮಾಡಿದ್ದ ಅವರು ಸಿಟ್ಟಿನ ಭರದಲ್ಲಿ ಜೇಬಿನಿಂದ ಪಿಸ್ತೂಲನ್ನು ಹೊರತೆಗೆದು, ಒಂದು ಗುಂಡನ್ನು ಗಾಳಿಯಲ್ಲಿ ಹಾರಿಸಿ,ಎರಡನೇ ಗುಂಡನ್ನು ತನ್ನ ಎದೆಗೆ ಹಾರಿಸಿಕೊಂಡಿದ್ದಾರೆ. ಪೊಲೀಸರು ಮತ್ತು ಆ್ಯಂಬುಲನ್ಸ್ ಆಗಮಿಸಿದಾಗ ಪಾಂಡೆ ಕೊನೆಯುಸಿರೆಳೆದಿದ್ದರು. ಅವರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.





