ರಾಷ್ಟ್ರಗೀತೆಗೆ ಅಗೌರವ: 12 ಮಂದಿಯ ಬಂಧನದ ವಿರುದ್ಧ ಪ್ರತಿಭಟನೆ
ತಿರುವನಂತಪುರ, ಡಿ.13: ಕೇರಳದ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಸಿನೆಮಾ ಪ್ರದರ್ಶನದ ವೇಳೆ ರಾಷ್ಟ್ರಗೀತೆಗೆ ಗೌರವ ನೀಡದ ಆರೋಪದಲ್ಲಿ ಪೊಲೀಸರು 12 ಮಂದಿಯನ್ನು ವಶಕ್ಕೆ ಪಡೆದಿರುವುದನ್ನು 12 ಜನರ ಗುಂಪೊಂದು ಇಂದು ಇಲ್ಲಿನ ಚಿತ್ರಮಂದಿರವೊಂದರ ಹೊರಗೆ ಪ್ರತಿಭಟಿಸಿದೆ.
ರಾಷ್ಟ್ರಗೀತೆಯು ಡಿಜಿಟಲ್ ಪದ್ಯವಲ್ಲ. ರಾಷ್ಟ್ರಧ್ವಜವು ದೃಶ್ಯ-ಶ್ರವ್ಯವಲ್ಲ. ಸಿನೆಮಾ ಪ್ರಾಥಮಿಕವಾಗಿ ಒಂದು ಮನೋರಂಜನೆ. ಚಿತ್ರಮಂದಿರವು ಮನೋರಂಜನೆಯನ್ನು ಮಾರುವ ಸ್ಥಳ ಎಂದು ಬರೆದಿದ್ದ ಫಲಕವೊಂದನ್ನು ಹಿಡಿದು, ಚಿತ್ರೋತ್ಸವದ ಪ್ರಧಾನ ವೇದಿಕೆಯಾದ ಟಾಗೋರ್ ಚಿತ್ರಮಂದಿರದ ಮುಂದೆ ಅವರು ಪ್ರತಿಭಟನೆ ನಡೆಸಿದ್ದಾರೆ. ರಾಷ್ಟ್ರಗೀತೆಗೆ ಅಗೌರವ ತೋರಿಸಿದ ಆರೋಪದಲ್ಲಿ ನಿನ್ನೆ ರಾತ್ರಿ ಉತ್ಸವದ ಚಿತ್ರಗಳನ್ನು ಪ್ರದರ್ಶಿಸುತ್ತಿದ್ದ 2 ಚಿತ್ರಮಂದಿರಗಳಿಂದ ಒಟ್ಟು 12 ಮಂದಿಯನ್ನು ವಶಕ್ಕೆ ಪಡೆಯಲಾಗಿತ್ತು. ಬಂಧಿತರನ್ನು ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿತ್ತು.
Next Story





