ಬಿಜೆಪಿ ಏರ್ಪಡಿಸಿದ್ದ ಯಾಗದಲ್ಲಿ ಪುರೋಹಿತರಿಗೆ ದಕ್ಷಿಣೆಯಾಗಿ ಹಳೆಯ ನೋಟುಗಳ ವಿತರಣೆ...!
ಚಂಡಿಗಡ,ಡಿ.13: ಬಿಜೆಪಿಯು ಸಂಘಟಿಸಿದ್ದ, ಒಂಭತ್ತು ದಿನಗಳ ಕಾಲ ನಡೆದ ಲಕ್ಷ ಚಂಡಿ ಮಹಾಯಾಗವು ಸೋಮವಾರ ಸಮಾರೋಪಗೊಂಡಿದ್ದು,ವೈದಿಕ ವಿಧಿಗಳನ್ನು ನಡೆಸಲು ಆಹ್ವಾನಿತರಾಗಿದ್ದ ಪುರೋಹಿತರು ತೀವ್ರ ಅಸಮಾಧಾನದೊಂದಿಗೆ ತಮ್ಮ ಊರುಗಳಿಗೆ ಮರಳಿದ್ದಾರೆ. ಕಾರಣ ಇವರಿಗೆಲ್ಲ ದಕ್ಷಿಣೆಯಾಗಿ ಹಳೆಯ 500 ಮತ್ತು 1,000 ರೂ.ನೋಟುಗಳನ್ನು ವಿತರಿಸಲಾಗಿತ್ತು.
ಉಜ್ಜಯಿನಿ, ವಾರಣಾಸಿ ಮತ್ತು ಮಥುರಾಗಳಿಂದ ಕರೆಸಲಾಗಿದ್ದ ಸುಮಾರು 2,000 ಪುರೋಹಿತರು ತಮ್ಮ ಆತಿಥೇಯರು ಕಪ್ಪುಹಣವನ್ನು ಬಳಸಿ ಯಾಗವನ್ನು ನೆರವೇರಿಸಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆಯನ್ನೂ ನಡೆಸಿದರು.
ಭಿವಾನಿಯ ಸ್ಥಳೀಯ ಸಂತ ಸ್ವಾಮಿ ಮಹಾದೇವ ಅವರ ನೇತೃತ್ವದ ಲಕ್ಷ ಚಂಡಿ ಮಹಾಯಾಗ ಸಂಘಟನಾ ಸಮಿತಿಯು ಬಿಜೆಪಿಯ ಸಹಭಾಗಿತ್ವದೊಡನೆ ನಡೆಸಿದ ಯಾಗದಲ್ಲಿ ರಾಜ್ಯದ ಹಲವರು ಸಚಿವರು,ರಾಜ್ಯಪಾಲರು ಮತ್ತಿತರ ಗಣ್ಯರು ಭಾಗ ವಹಿಸಿದ್ದರು.
ಪ್ರತಿಯೊಬ್ಬ ಪುರೋಹಿತರಿಗೂ 3,000 ರೂ.ನಿಂದ 5,000 ರೂ. ವರೆಗೆ ದಕ್ಷಿಣೆ ನೀಡಲಾಗಿತ್ತು. ಈ ಹಳೆಯ ನೋಟುಗಳನ್ನು ತಾವೇನು ಮಾಡುವುದು? ತಮ್ಮ ಬಳಿ ಊರಿಗೆ ಮರಳಲೂ ಹಣವಿಲ್ಲ ಎಂದು ಕ್ಯಾತೆ ತೆಗೆದಾಗ ಸಂಘಟಕರು ಅವರ ದಕ್ಷಿಣೆಯನ್ನು ಇನ್ನಷ್ಟು ಹೆಚ್ಚಿಸಿ ಊರಿಗೆ ಮರಳಲು ಬಸ್ ಟಿಕೆಟ್‌ಗಳ ವ್ಯವಸ್ಥೆ ಮಾಡಿದ್ದರು.
ಪುರೋಹಿತರಿಗೆ ಒಟ್ಟು 80 ಲ.ರೂ.ಗಳ ಹಳೆಯ ನೋಟುಗಳನ್ನು ದಕ್ಷಿಣೆಯ ರೂಪದಲ್ಲಿ ಹಂಚಲಾಗಿದೆ ಎಂದು ಸ್ಥಳದಲ್ಲಿದ್ದ ಮೂಲಗಳು ತಿಳಿಸಿದವು. ಆದರೆ ಸಂಘಟಕರಲೋರ್ವರಾಗಿರುವ ಹರ್ಯಾಣ ಜಾನುವಾರು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ರಿಷಿ ಪ್ರಕಾಶ ಶರ್ಮಾ ಅವರು, ಪ್ರತಿ ಸಂಘಟಕರಿಗೂ ಪುರೋಹಿತರನ್ನು ಕರೆತರುವ ಮತ್ತು ಅವರಿಗೆ ದಕ್ಷಿಣೆಯನ್ನು ನೀಡುವ ಜವಾಬ್ದಾರಿ ವಹಿಸಲಾಗಿತ್ತು. ಕೆಲವು ಪುರೋಹಿತರು ಊರಿಗೆ ಮರಳಲೂ ದುಡ್ಡಿಲ್ಲ ಎಂದು ದೂರಿಕೊಂಡಾಗಷ್ಟೇ ಹಳೆಯ ನೋಟುಗಳನ್ನು ನೀಡಿದ್ದು ನಮ್ಮ ಗಮನಕ್ಕೆ ಬಂದಿತ್ತು ಎಂದಿದ್ದಾರೆ.
ಅಷ್ಟಕ್ಕೂ ಅದರಲ್ಲಿ ತಪ್ಪೇನಿದೆ? ಬ್ಯಾಂಕುಗಳಲ್ಲಿ ಡಿ.30ರವರೆಗೂ ಅವು ನಡೆಯುತ್ತವೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.





