ಬಿಜೆಪಿಯೊಳಗೆ ಸಂಕಟ ಸೃಷ್ಟಿಸಿದ ನೋಟು ರದ್ದತಿ
ಸಂಸದರಿಂದ ಗೊಣಗಾಟ ಶುರು
ಹೊಸದಿಲ್ಲಿ, ಡಿ.13: ಕೇಂದ್ರ ಸರಕಾರದ ನೋಟು ರದ್ದತಿ ಕ್ರಮ- ಮೊದಲಾಗಿ ಕಾಳಧನ ನಿಯಂತ್ರಣದ ಬಗ್ಗೆ ಮಾತನಾಡಿ ನಂತರ ಕ್ಯಾಶ್ ಲೆಸ್ ಇಕಾನಮಿಯತ್ತ ವಾಲಿ ಈಗ ಡಿಜಿಟಲ್ ವ್ಯವಹಾರಗಳಿಗೆ ಒತ್ತು ನೀಡಬೇಕೆಂದು ಕರೆ ನೀಡಲು ಆರಂಭಿಸಿದ ರೀತಿ ಪಕ್ಷದ ಸಂಸದರಲ್ಲಿ ಒಂದು ರೀತಿಯ ಸಂಕಟ ಸೃಷ್ಟಿಸಿದೆ. ಜನರು ನಗದು ಕೊರತೆಯಿಂದ ಅನುಭವಿಸುತ್ತಿರುವ ಸಮಸ್ಯೆಗಳು ಬ್ಯಾಂಕುಗಳು ಮತ್ತು ಎಟಿಎಂಗಳ ಮುಂದೆ ಅವರು ನಿಲ್ಲುತ್ತಿರುವ ಸರತಿ ಸಾಲುಗಳಿಂದಾಗಿ ಎಲ್ಲಿ ಅವರ ಕೋಪ ತಮ್ಮ ಮೇಲೆ ತಿರುಗುವುದೋ ಎಂಬ ಭಯ ಹಲವು ಸಂಸದರನ್ನು ಕಾಡಲು ಆರಂಭಿಸಿವೆಯೆಂದು ಮೂಲಗಳು ತಿಳಿಸುತ್ತವೆ.
ಈಗಾಗಲೇ ಬಿಜೆಪಿ ಸಂಸದರ ಒಂದು ಗುಂಪು ತಮ್ಮ ಹೆಸರು ಬಹಿರಂಗಪಡಿಸಬಾರದೆಂಬ ಷರತ್ತಿನ ಮೇರೆಗೆ ತನ್ನ ಅಸಹನೆಯನ್ನು ತೋಡಿಕೊಂಡಿದೆಯೆಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿಯೊಂದು ತಿಳಿಸಿದೆ. ಸಣ್ಣ ವ್ಯಾಪಾರಸ್ಥರು, ಕಾರ್ಮಿಕರು, ತರಕಾರಿ ಮಾರಾಟಗಾರರು ಮತ್ತಿತರ ಸಣ್ಣ ವಹಿವಾಟುದಾರರು ನಗದು ಕೊರತೆಯಿಂದ ಎದುರಿಸುತ್ತಿರುವ ಸಮಸ್ಯೆ ಹಾಗೂ ಇತರ ಕ್ಷೇತ್ರಗಳಲ್ಲಿ ಉದ್ಯೋಗ ಕಡಿತದ ಭಯ ಜನರಲ್ಲಿ ಅಸಹನೆ ಮೂಡಿಸಿದೆಯೆಂದು ಈ ಸಂಸದರು ಒಪ್ಪಿಕೊಂಡಿದ್ದಾರೆಂದು ಮೂಲಗಳು ತಿಳಿಸುತ್ತವೆ.
ವಿವಿಧ ರಾಜ್ಯಗಳು ಮುಖ್ಯವಾಗಿ ಚುನಾವಣೆ ನಡೆಯಲಿರುವ ಉತ್ತರಪ್ರದೇಶದ ಪಕ್ಷದ ನಾಯಕರು ಬಹಿರಂಗವಾಗಿ ಗೊಣಗಾಟ ಆರಂಭಿಸಿದ್ದು ಈ ಬಗ್ಗೆ ಪಕ್ಷದ ಸಭೆಗಳಲ್ಲಿ ಮಾತನಾಡಲಾರಂಭಿಸಿದ್ದಾರೆ. ಇದನ್ನು ಗಮನದಲ್ಲಿರಿಸಿ ಪಕ್ಷ ನಾಯಕತ್ವ ತನ್ನ ಚುನಾವಣಾ ತಂತ್ರಗಾರಿಕೆಯ ಬಗ್ಗೆ ಇನ್ನಷ್ಟೇ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ.
‘‘ನೋಟು ಅಮಾನ್ಯದಿಂದ ಭಾರತ ಡಿಜಿಟಲ್ ಆರ್ಥಿಕತೆಯತ್ತ ಸಾಗಬಹುದು ಎಂಬ ಸರಕಾರದ ವಾದವನ್ನು ಒಪ್ಪುವುದು ಕಷ್ಟ’’ ಎಂದು ಸಂಸದರೊಬ್ಬರು ಹೇಳಿದ್ದಾರೆ. ಈಗಲೂ ಹಲವೆಡೆ ವಿದ್ಯುತ್ ಮತ್ತು ಮೊಬೈಲ್ ಸಂಪರ್ಕದ ವಿಚಾರಗಳಲ್ಲಿ ಸಮಸ್ಯೆಯಿದೆ. ಹೀಗಿರುವಾಗ ಸಣ್ಣ ಅಂಗಡಿದಾರರಿಗೆ ನಾವು ಹೇಗೆ ಡಿಜಿಟಲ್ ತಂತ್ರಜ್ಞಾನವನ್ನು ಅಪ್ಪಿಕೊಳ್ಳಿ ಎಂದು ಹೇಳುವುದು?’’ ಎಂದು ಅವರು ಪ್ರಶ್ನಿಸಿದ್ದಾರೆ.
ತರುವಾಯ ಹಿಂಪಡೆಯಲ್ಪಟ್ಟ ಹೆಚ್ಚಿನ ನೋಟುಗಳು ಮತ್ತೆ ಬ್ಯಾಂಕುಗಳಿಗೆ ವಾಪಸಾಗಬಹುದೆಂಬ ವರದಿಗಳು ಸಂಸದರನ್ನು ಮತ್ತಷ್ಟು ನಿರಾಸೆಗೊಳಸಿದೆ.





